Cinema News
ಅಕ್ಟೋಬರ್ 2ಕ್ಕೆ ‘ಹುಲಿ ಬೀರ’ ಬಿಡುಗಡೆ; ಶಶಿಕುಮಾರ್ ಬಿಡುಗಡೆ ಮಾಡಿದ ಟ್ರೈಲರ್

ಈಗಾಗಲೇ ‘ಜಿಗ್ರಿ ದೋಸ್ತ್ ಜಿಗ್ರಿ ದೋಸ್ತ್’ ಹಾಗೂ ‘ಹುಟ್ಟಿಬಂದೆ ಹುಲಿಬೀರನಾಗಿ’ ಹಾಡುಗಳ ಮೂಲಕ ಗಮನ ಸೆಳೆಯುತ್ತಿರುವ ಉತ್ತರ ಕರ್ನಾಟಕದ ಸೊಗಡಿನ ಸಿನಿಮಾ ‘ಹುಲಿ ಬೀರ’ ಅಕ್ಟೋಬರ್ 2ರಂದು ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ಸಾಯಿ ಸ್ಟಾರ್ ಸಿನಿಮಾಸ್ ಬ್ಯಾನರ್‌ನಲ್ಲಿ ದಾವಲ್ ಸಾಹೇಬ ಹುಣಶೀಮರದ, ಅಶೋಕ್ ಎನ್. (ತುರುವೇಕೆರೆ) ಹಾಗೂ ಸುಜಾತ ಗಿರೀಶ್ ನಿರ್ಮಿಸಿರುವ ಚಿತ್ರದ ಟ್ರೈಲರ್ ಅನ್ನು ಹಿರಿಯ ನಟ, ಸುಪ್ರೀಂ ಹೀರೋ ಶಶಿಕುಮಾರ್ ಅನಾವರಣಗೊಳಿಸಿದರು. ನಿರ್ದೇಶಕ ಎ.ಪಿ. ಅರ್ಜುನ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಮದರಂಗಿ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರದಲ್ಲಿ ‘ಯರ್ರಾಬಿರ್ರಿ’ ಖ್ಯಾತಿಯ ರೂರಲ್ ಅಂಜನ್ ನಾಯಕನಾಗಿ, ಚೈತ್ರ ತೋಟದ ಹಾಗೂ ವನು ಪಾಟೀಲ್ ನಾಯಕಿಯರಾಗಿ ನಟಿಸಿದ್ದಾರೆ.
ಉತ್ತರ ಕರ್ನಾಟಕದ ಮಣ್ಣಿನ ಸೊಗಡನ್ನು ಪ್ರಧಾನವಾಗಿಟ್ಟುಕೊಂಡಿರುವ ‘ಹುಲಿ ಬೀರ’ ಚಿತ್ರಕ್ಕೆ ವೀರಸಮರ್ಥ್ ಸಂಗೀತ ಸಂಯೋಜಿಸಿದ್ದು, ಸನಾತನ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಗ್ರಾಮದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ವೀಕ್ಷಿಸಿದ ಬಳಿಕ ಮಾತನಾಡಿದ ಶಶಿಕುಮಾರ್, ಚಿತ್ರದಲ್ಲಿ ರಾ ಕಂಟೆಂಟ್ ಕಾಣಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕವಾಗಲಿ ಅಥವಾ ದಕ್ಷಿಣ ಕರ್ನಾಟಕವಾಗಲಿ, ಕಲೆ ಮತ್ತು ಕಲಾವಿದರಿಗೆ ಗಡಿಗಳಿಲ್ಲ; ಭಾಷೆ ಮತ್ತು ಮಾತಿನ ಶೈಲಿ ಮಾತ್ರ ಬದಲಾಗುತ್ತದೆ ಎಂದರು. ಕಂಟೆಂಟ್ ಆಧಾರಿತ ಸಿನಿಮಾಗಳು ಎಂದಿಗೂ ಪ್ರೇಕ್ಷಕರನ್ನು ನಿರಾಸೆಗೊಳಿಸಿಲ್ಲ ಎಂದು ಹೇಳಿ, ಹಳೆಯ ಮೌಲ್ಯಗಳನ್ನು ಉಳಿಸಿಕೊಂಡು ಹೊಸ ರೀತಿಯ ಸಿನಿಮಾಗಳನ್ನು ಮಾಡುವಂತೆ ಯುವ ಚಿತ್ರತಂಡಗಳಿಗೆ ಸಲಹೆ ನೀಡಿದರು. ಎ.ಪಿ. ಅರ್ಜುನ್ ಅವರು ಅಂಜನ್ ತಮ್ಮ ಜಿಮ್ ಪರಿಚಯದವರು ಎಂದು ಹೇಳಿ, ಚಿತ್ರದ ಫುಟೇಜ್ ನೋಡಿದ್ದು ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಾಧೀಶ ಎನ್.ಎಸ್. ಪಾಟೀಲ್, ವಿತರಕ ಕೆ. ಮುನೀಂದ್ರ, ಟ್ರೈಲರ್‌ಗೆ ಹಿನ್ನೆಲೆ ಧ್ವನಿ ನೀಡಿರುವ ಸವಿತಕ್ಕ ಸೇರಿದಂತೆ ಹಲವರು ಮಾತನಾಡಿದರು. ಕೆ. ಮುನೀಂದ್ರ ಈಗಾಗಲೇ ಸಿನಿಮಾ ವೀಕ್ಷಿಸಿದ್ದು, ಚಿತ್ರದ ಕ್ಲೈಮ್ಯಾಕ್ಸ್ ವಿಶೇಷವಾಗಿದೆ ಎಂದರು. ನಿರ್ಮಾಪಕ ದಾವಲ್ ಸಾಹೇಬ ಹುಣಶೀಮರದ ಟ್ರೈಲರ್ ವೀಕ್ಷಿಸುವಾಗ ಭಾವುಕರಾದೆವು ಹಾಗೂ ಈಗಾಗಲೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡರು. ಮತ್ತೊಬ್ಬ ನಿರ್ಮಾಪಕ ಅಶೋಕ್ ಎನ್. ಇದು ಸಾಯಿ ಸ್ಟಾರ್ ಸಿನಿಮಾಸ್‌ನ ಮೊದಲ ನಿರ್ಮಾಣದ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸುಜಾತ ಗಿರೀಶ್ ಈಗಾಗಲೇ ಚಿತ್ರದ ಮೂರು ಹಾಡುಗಳು ಜನಪ್ರಿಯವಾಗಿವೆ ಎಂದು ತಿಳಿಸಿದರು. ಬದಾಮಿ ಬನಶಂಕರಿ ಸನ್ನಿಧಿಯಲ್ಲಿ ಆರಂಭವಾದ ಚಿತ್ರದ ಚಿತ್ರೀಕರಣ ಸವದತ್ತಿಯಲ್ಲಿ ಪೂರ್ಣಗೊಂಡಿದೆ ಎಂದರು.

ಸಂಗೀತ ನಿರ್ದೇಶಕ ವೀರಸಮರ್ಥ್ ಚಿತ್ರದ ಜಾನಪದ ಶೈಲಿಯ ಹಾಗೂ ಮಣ್ಣಿನ ಸೊಗಡಿನ ಹಾಡುಗಳು ಪ್ರಮುಖ ಆಕರ್ಷಣೆ ಎಂದರು. ನಿರ್ದೇಶಕ ಮಲ್ಲಿಕಾರ್ಜುನ್, ಟ್ರೈಲರ್ ಸಿನಿಮಾದ ಆಮಂತ್ರಣ ಪತ್ರಿಕೆಯಿದ್ದಂತೆ. ಉತ್ತರ ಕರ್ನಾಟಕದ ಜೀವನಶೈಲಿ ಹಾಗೂ ಸೊಗಡನ್ನು ಪ್ರಾಮಾಣಿಕವಾಗಿ ಕಟ್ಟಿಕೊಡಲಾಗಿದೆ ಎಂದು ಹೇಳಿದರು. ನಾಯಕ ಅಂಜನ್ ತಮ್ಮ ಬದುಕಿನ ಕಷ್ಟದ ದಿನಗಳಲ್ಲಿ ‘ಹುಲಿ ಬೀರ’ ಚಿತ್ರ ಹೊಸ ಚೈತನ್ಯ ನೀಡಿತು ಎಂದು ಭಾವುಕರಾಗಿ ಹೇಳಿಕೊಂಡರು. 2019ರ ಅಪಘಾತದ ಬಳಿಕ ತಾವು ಮಾನಸಿಕವಾಗಿ ಕುಗ್ಗಿದ್ದಾಗ ಈ ಸಿನಿಮಾ ಹೊಸ ಭರವಸೆ ನೀಡಿತು ಎಂದ ಅವರು, ಪ್ರತಿಯೊಂದು ಮನೆಯಲ್ಲೂ ಇರುವ ಸಾಮಾನ್ಯ ಹುಡುಗನೊಬ್ಬ ಹೇಗೆ ಇಡೀ ಊರಿನ ಬದುಕಿಗೆ ಬದಲಾವಣೆ ತರುತ್ತಾನೆ ಎಂಬುದೇ ಚಿತ್ರದ ಮೂಲ ಕಥೆ ಎಂದು ವಿವರಿಸಿದರು. ಧರ್ಮ ವಿಶ್ ಹಿನ್ನೆಲೆ ಸಂಗೀತ ನೀಡಿರುವ ಈ ಚಿತ್ರ ಅಕ್ಟೋಬರ್ 2ರಂದು ಪ್ರೇಕ್ಷಕರ ಮುಂದೆ ಬರಲಿದೆ.
