Cinema News
ನಂಬಿಕೆ, ಭಯ, ವಿಧಿಯ ಆಟ; ಗಮನ ಸೆಳೆಯುತ್ತಿದೆ ‘ಜನ್ಮೋತ್ಸವ’ ಟ್ರೇಲರ್

ಗಣೇಶೋತ್ಸವ ಹಾಗೂ ಗಣೇಶ ವಿಸರ್ಜನೆಯ ಸಂಭ್ರಮದ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು, ಕೇವಲ ಒಂದೇ ರಾತ್ರಿಯಲ್ಲಿ ನಡೆಯುವ ವಿಭಿನ್ನ ಕಥಾಹಂದರದ ಸಿನಿಮಾ ‘ಜನ್ಮೋತ್ಸವ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ನಂಬಿಕೆ, ಭಯ, ವಿಧಿ ಹಾಗೂ ಭಾವನೆಗಳ ನಡುವೆ ನಡೆಯುವ ರೋಚಕ ಘಟನೆಗಳನ್ನು ಒಳಗೊಂಡಿರುವ ಟ್ರೇಲರ್, ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಭಕ್ತಿ ಮತ್ತು ಭಾವನಾತ್ಮಕ ಅಂಶಗಳ ಜೊತೆಗೆ ಥ್ರಿಲ್ಲರ್ ಕಥನವನ್ನು ಹೊಂದಿರುವ ಈ ಚಿತ್ರ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.
ಚಿತ್ರದ ಕಥೆ ಹಾಗೂ ಚಿತ್ರೀಕರಣದ ಅನುಭವದ ಕುರಿತು ಮಾತನಾಡಿರುವ ನಿರ್ದೇಶಕ ರಾಮಾಚಾರಿ, ಸಿನಿಮಾದ ಸಂಪೂರ್ಣ ಕಥೆ ಒಂದೇ ರಾತ್ರಿಯಲ್ಲಿ ನಡೆಯುತ್ತದೆ ಎಂದು ತಿಳಿಸಿದ್ದಾರೆ. ಸಂಜೆ 6 ಗಂಟೆಗೆ ಆರಂಭವಾಗುವ ಕಥೆ ಮರುದಿನ ಬೆಳಗ್ಗೆ 6 ಗಂಟೆಗೆ ಅಂತ್ಯವಾಗುತ್ತದೆ. ರಾಯಚೂರು ಭಾಗದಲ್ಲಿ ಚಿತ್ರೀಕರಣ ನಡೆಸುವ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ವಿಶೇಷವಾಗಿ ರಾತ್ರಿ ದೃಶ್ಯಗಳ ನಡುವೆ ಮಳೆಯ ಸನ್ನಿವೇಶವನ್ನು ಚಿತ್ರೀಕರಿಸುವ ಅಗತ್ಯವಿದ್ದರೂ, ಆ ಭಾಗದಲ್ಲಿ ರೇನ್ ಗನ್ ಸೌಲಭ್ಯ ಸುಲಭವಾಗಿ ದೊರೆಯಲಿಲ್ಲ. ಹೀಗಾಗಿ ಪಂಪ್ಸೆಟ್ ಬಳಸಿ ಕೃತಕ ಮಳೆಯ ವ್ಯವಸ್ಥೆ ಮಾಡಿಕೊಂಡು ಪ್ರಮುಖ ದೃಶ್ಯವನ್ನು ಚಿತ್ರೀಕರಿಸಲಾಯಿತು ಎಂದು ನಿರ್ದೇಶಕರು ವಿವರಿಸಿದ್ದಾರೆ.

ಚಿತ್ರದ ಕೆಲವು ಪ್ರಮುಖ ಪಾತ್ರಗಳು ಬಿಹಾರ ಹಾಗೂ ಉತ್ತರ ಭಾರತದ ಹಿನ್ನೆಲೆಯಿಂದ ಬಂದಿರುವುದರಿಂದ, ಕಥೆಯ ನೈಜತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಿಂದಿ ಭಾಷಿಕ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ರಾಮಾಚಾರಿ ಹೇಳಿದ್ದಾರೆ. ತಾಂತ್ರಿಕ ವಿಭಾಗದಲ್ಲೂ ಬೇರೆ ಬೇರೆ ಹಿನ್ನೆಲೆಯ ಪ್ರತಿಭೆಗಳು ಕೆಲಸ ಮಾಡಿದ್ದು, ಛಾಯಾಗ್ರಾಹಕ ವಿಜಯ್ ಮಿಶ್ರಾ ಅವರ ಪರಿಚಯ ಇನ್ಸ್ಟಾಗ್ರಾಂ ಮೂಲಕವಾಗಿತ್ತು ಎಂದು ತಿಳಿಸಿದ್ದಾರೆ. ‘ಮಾರುತಿ ಪಿಕ್ಚರ್ಸ್’ ಹಾಗೂ ‘ಲೈಟ್ಬಾಯ್ ಫಿಲ್ಮ್ಸ್’ ಬ್ಯಾನರ್ನಲ್ಲಿ ಹರಿವರ್ಧನ್, ಪವನ್ ಆಚಾರ್, ವಿಜಯ್ ಮಿಶ್ರಾ ಮತ್ತು ತ್ರಿಶೂಲ್ ಕುಮಾರ್ ನಾಯಕ್ ಜಂಟಿಯಾಗಿ ನಿರ್ಮಿಸಿರುವ ಚಿತ್ರಕ್ಕೆ ರಾಮಾಚಾರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಾರ ವೆಂಕಟೇಶ್, ರಮೇಶ್ ಬಾದರದಿನ್ನಿ ಹಾಗೂ ರಾಕೇಶ್ ಮಂದಕಲ್ ಸಹ-ನಿರ್ಮಾಪಕರಾಗಿದ್ದು, ಪ್ರಸನ್ನ ಮತ್ತು ಉಪೇಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

‘ಜನ್ಮೋತ್ಸವ’ ಚಿತ್ರಕ್ಕೆ ವಿಜಯ್ ಮಿಶ್ರಾ ಛಾಯಾಗ್ರಹಣ, ಮಂಜುನಾಥ ನಾಗಬಾ ಸಂಕಲನ ಹಾಗೂ ಪ್ರದ್ಯೋತನ್ ಸಂಗೀತವಿದೆ. ಐಶ್ವರ್ಯ ಹೆಚ್., ಕೃಷ್ಣ ಸಿಂಗ್ ಬಿಷ್ಟ್, ಅನ್ವಿಶಾ ತ್ಯಾಗಿ, ಸುನೀಲ್ ಪುರಾಣಿಕ್, ರಕ್ಷಿತ್ ರಾಮಚಂದ್ರ ಶೆಟ್ಟಿ, ಮಂತು ಮಡ್ಲಿ, ಮಹಾಂತೇಶ್ ಹಿರೇಮಠ, ವಿಕೀಶ ರಾವ್, ಅನ್ಮೋಲ್ ಭಟ್ಕಳ್, ಸಲ್ಮಾನ್ ಅಹಮದ್, ಮಂಜುನಾಥ್ ನಾಗಬ, ಡಿಂಗ್ರಿ ನರೇಶ್, ರಿತಿಕಾ, ಶಶಿ ಪಾಟೀಲ್ ಹಾಗೂ ಕೋಟೆ ರಾಜ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ. ಟ್ರೇಲರ್ ಮೂಲಕ ಗಮನ ಸೆಳೆದಿರುವ ಈ ಥ್ರಿಲ್ಲರ್ ಸಿನಿಮಾ ಶೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
