Cinema News
‘ಎಕ್ಕಾ’ ಬಳಿಕ ಯುವ ರಾಜಕುಮಾರ್ ಹೊಸ ಸಿನಿಮಾ ಘೋಷಣೆ; ‘ಪವರ್ ಮ್ಯಾನ್’ ಆಗಿ ಕಮ್‌ಬ್ಯಾಕ್

ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ನಿರ್ಮಾಣದಲ್ಲಿ, ಜಡೇಶ್ ಕೆ. ಹಂಪಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಯುವ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಹೊಸ ಚಿತ್ರದ ಶೀರ್ಷಿಕೆ ಗಣೇಶ ಚತುರ್ಥಿಯ ಶುಭದಿನದಂದು ಅನಾವರಣಗೊಂಡಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಈ ಚಿತ್ರಕ್ಕೆ ‘ಪವರ್ ಮ್ಯಾನ್’ ಎಂಬ ವಿಭಿನ್ನ ಶೀರ್ಷಿಕೆ ಇಡಲಾಗಿದ್ದು, ‘ದಿ ಗ್ರೇಟೆಸ್ಟ್ ಪವರ್ ಇನ್ ಎ ಗುಡ್ ಹಾರ್ಟ್’ ಎಂಬ ಅಡಿಬರಹವನ್ನೂ ಹೊಂದಿದೆ. ಸದಾಶಿವನಗರದಲ್ಲಿ ಡಾ. ರಾಜಕುಮಾರ್ ಅವರು ವಾಸವಿದ್ದ ಸ್ಥಳದಲ್ಲೇ ನಡೆದ ವಿಶೇಷ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದರು. ಮಂಗಳ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರದ ಶೀರ್ಷಿಕೆ ಅನಾವರಣದ ಬಗ್ಗೆ ಮಾತನಾಡಿದ ನಿರ್ಮಾಪಕ ತರುಣ್ ಸುಧೀರ್, ಮೊದಲು ಡಿಜಿಟಲ್ ಮೂಲಕ ಟೈಟಲ್ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ದೇವರ ಕೃಪೆಯಿಂದ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರು ವಾಸವಿದ್ದ ಸ್ಥಳದಲ್ಲೇ ರಾಘವೇಂದ್ರ ರಾಜಕುಮಾರ್ ಅವರಿಂದ ಶೀರ್ಷಿಕೆ ಅನಾವರಣವಾಗಿರುವುದು ಸಂತಸ ತಂದಿದೆ ಎಂದು ಹೇಳಿದರು. ತರುಣ್ ಸುಧೀರ್ ಹಾಗೂ ಜಗದೀಶ್ ಗೌಡ ಜಂಟಿಯಾಗಿ ಚಿತ್ರ ನಿರ್ಮಿಸುತ್ತಿದ್ದು, ಅಟ್ಲಾಂಟ ನಾಗೇಂದ್ರ ಸಹ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಎಲ್ಲರಿಗೂ ಆಪ್ತವಾಗುವ ಕಥೆಯನ್ನು ಹೊಂದಿರುವ ಈ ಚಿತ್ರ, ವಿಶೇಷವಾಗಿ ಮಕ್ಕಳಿಗೂ ಇಷ್ಟವಾಗಲಿದೆ ಎಂಬ ವಿಶ್ವಾಸವನ್ನು ನಿರ್ಮಾಪಕರು ವ್ಯಕ್ತಪಡಿಸಿದ್ದಾರೆ.

‘ದಿ ಗ್ರೇಟೆಸ್ಟ್ ಪವರ್ ಇನ್ ಎ ಗುಡ್ ಹಾರ್ಟ್’ ಎಂಬ ಅಡಿಬರಹವೇ ಚಿತ್ರದ ಪ್ರಮುಖ ಕಥಾಹಂದರವನ್ನು ಸೂಚಿಸುತ್ತದೆ ಎಂದು ನಿರ್ದೇಶಕ ಜಡೇಶ್ ಕೆ. ಹಂಪಿ ಹೇಳಿದ್ದಾರೆ. ಇದು ಈ ನೆಲದ ಕಥೆಯಾಗಿದ್ದು, ಈ ಹಿಂದೆ ತಮ್ಮ ಸಿನಿಮಾಗಳಲ್ಲಿ ಹೇಳಿದ ರೀತಿಗಿಂತ ವಿಭಿನ್ನವಾಗಿ ಈ ಬಾರಿ ಕಥೆಯನ್ನು ನಿರೂಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದಿದ್ದಾರೆ. ಚಿತ್ರದಲ್ಲಿ ಹಾಡುಗಳು ಹಾಗೂ ಸಾಹಸ ಸನ್ನಿವೇಶಗಳಿಗೆ ವಿಶೇಷ ಮಹತ್ವವಿದ್ದು, ಯುವ ರಾಜಕುಮಾರ್ ಅವರ ನೃತ್ಯ ಮತ್ತು ಆಕ್ಷನ್ ಎರಡೂ ಪ್ರಮುಖ ಆಕರ್ಷಣೆಯಾಗಲಿವೆ. ಸ್ಕ್ರಿಪ್ಟ್ ಕೆಲಸ ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆ ‘ಪವರ್ ಮ್ಯಾನ್’ ಆಗಿದ್ದರೂ, ಇದು ಪುನೀತ್ ರಾಜಕುಮಾರ್ ಅವರ ಕುರಿತಾದ ಸಿನಿಮಾ ಅಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

‘ಎಕ್ಕಾ’ ಚಿತ್ರದ ಬಳಿಕ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಗಣೇಶ ಹಬ್ಬದಂದು ತಮ್ಮ ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿರುವುದು ಯುವ ರಾಜಕುಮಾರ್ ಅವರಿಗೆ ಸಂತಸ ತಂದಿದೆ. ಜಡೇಶ್ ಕೆ. ಹಂಪಿ ಅವರೊಂದಿಗೆ ಹಲವು ತಿಂಗಳುಗಳಿಂದ ಕಥೆಯ ಕುರಿತು ಚರ್ಚೆ ನಡೆಸಲಾಗಿದ್ದು, ಇದೀಗ ಕಥೆ ಹಾಗೂ ಸ್ಕ್ರಿಪ್ಟ್ ಸಿದ್ಧವಾಗಿದೆ. ‘ಪವರ್ ಮ್ಯಾನ್’ ಹೆಸರಿನಲ್ಲೇ ಪವರ್ ಇದೆ. ತಾವು ಈ ಹಿಂದೆ ಮಾಡಿರದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿಯ ವಿಚಾರ ಎಂದು ಯುವ ರಾಜಕುಮಾರ್ ಹೇಳಿದ್ದಾರೆ. ಸದ್ಯ ಚಿತ್ರತಂಡ ಚಿತ್ರೀಕರಣದ ಸಿದ್ಧತೆಯಲ್ಲಿ ತೊಡಗಿದ್ದು, ಈ ಸಿನಿಮಾ ಆರಂಭಕ್ಕೂ ಮುನ್ನವೇ ಭಾರೀ ನಿರೀಕ್ಷೆ ಮೂಡಿಸಿದೆ.
