Cinema News
1980ರ ರೆಟ್ರೊ ಲೋಕಕ್ಕೆ ಶರಣ್, ದಿಗಂತ್, ನಿಶ್ವಿಕಾ; ‘ಬೊಮ್ ಭಾಯ್’ ಶುರು

1980ರ ದಶಕದ ರೆಟ್ರೋ ಹಿನ್ನೆಲೆಯಲ್ಲೊಂದು ಸಂಪೂರ್ಣ ಮನರಂಜನಾತ್ಮಕ ಕಥೆಯನ್ನು ತೆರೆಗೆ ತರಲು ಪಿ.ಆರ್.ಎಫ್ ಸ್ಟುಡಿಯೋಸ್ ಸಜ್ಜಾಗಿದೆ. ವಿಂಧ್ಯಾ ಬಾಲಾಜಿ ಪೋತರಾಜ್ ಹಾಗೂ ಕಾಂತರಾಜ್ ನಿರ್ಮಿಸುತ್ತಿರುವ ‘ಬೊಮ್ ಭಾಯ್’ ಚಿತ್ರದ ಮುಹೂರ್ತ ಸಮಾರಂಭ ಗಣೇಶ ಚತುರ್ಥಿಯ ಶುಭದಿನದಂದು ನೆರವೇರಿದೆ. ಶಶಿಧರ್ ನಿರ್ದೇಶನದ ಈ ಚಿತ್ರದಲ್ಲಿ ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ 1980ರ ದಶಕದ ಹಿನ್ನೆಲೆಯ ಸಿನಿಮಾಗಳ ಟ್ರೆಂಡ್ ಜೋರಾಗಿದ್ದು, ಇದೇ ಕಾಲಘಟ್ಟವನ್ನು ಆಧರಿಸಿರುವ ‘ಬೊಮ್ ಭಾಯ್’ ಕೂಡ ವಿಭಿನ್ನ ನಿರೀಕ್ಷೆ ಮೂಡಿಸಿದೆ.
ಚಿತ್ರದ ಕುರಿತು ಮಾತನಾಡಿದ ನಟ ಶರಣ್, ತಮ್ಮ ವೃತ್ತಿಜೀವನದಲ್ಲಿ ಈವರೆಗೆ ಮಾಡಿರದ ರೀತಿಯ ಪಾತ್ರವೊಂದು ‘ಬೊಮ್ ಭಾಯ್’ನಲ್ಲಿ ಸಿಕ್ಕಿದೆ ಎಂದು ಹೇಳಿದ್ದಾರೆ. ನಿರ್ದೇಶಕ ಶಶಿಧರ್ ಅವರೊಂದಿಗೆ ಸಾಕಷ್ಟು ದಿನಗಳಿಂದ ಕಥೆಯ ಕುರಿತು ಚರ್ಚೆ ನಡೆಸಲಾಗಿದ್ದು, ಕಥೆ ಹಾಗೂ ಪಾತ್ರ ಎರಡೂ ಇಷ್ಟವಾಗಿವೆ ಎಂದಿದ್ದಾರೆ. ಚಿತ್ರದಲ್ಲಿ ಹಾಸ್ಯವೇ ಪ್ರಮುಖ ಅಂಶವಾಗಿದ್ದು, 1980ರ ದಶಕದ ಟ್ರೆಂಡ್ ಆರಂಭವಾಗುವ ಮೊದಲೇ ಈ ಚಿತ್ರದ ಕಥೆ ಸಿದ್ಧವಾಗಿತ್ತು ಎಂದು ಶರಣ್ ತಿಳಿಸಿದ್ದಾರೆ. ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೂ ಸಂತಸ ವ್ಯಕ್ತಪಡಿಸಿದ್ದಾರೆ.

ದಿಗಂತ್ ಕೂಡ ‘ಬೊಮ್ ಭಾಯ್’ ರೆಟ್ರೊ ಶೈಲಿಯ ಕಥೆಯಾಗಿದ್ದು, ತಮ್ಮ ಪಾತ್ರ ವಿಭಿನ್ನವಾಗಿರಲಿದೆ ಎಂದು ತಿಳಿಸಿದ್ದಾರೆ. ತಾವು ಈ ಹಿಂದೆ ಮಾಡಿರದಂತಹ ಪಾತ್ರವನ್ನು ಇಲ್ಲಿ ನಿರ್ವಹಿಸುತ್ತಿದ್ದು, ಶಶಿಧರ್ ಹೇಳಿದ ಕಥೆ ತಮಗೆ ಮೆಚ್ಚುಗೆಯಾಗಿದೆ ಎಂದಿದ್ದಾರೆ. ನಿಶ್ವಿಕಾ ನಾಯ್ಡು ಅವರಿಗೆ ಗಣಪತಿ ಹಬ್ಬದ ಜೊತೆಗೆ ಹೊಸ ಚಿತ್ರದ ಮುಹೂರ್ತವೂ ನಡೆದಿರುವುದು ದ್ವಿಗುಣ ಸಂಭ್ರಮ ತಂದಿದೆ. ‘ಗುರು ಶಿಷ್ಯರು’ ಬಳಿಕ ಶರಣ್ ಅವರೊಂದಿಗೆ ಮತ್ತೊಮ್ಮೆ ನಟಿಸುತ್ತಿರುವುದರ ಜೊತೆಗೆ ಶರಣ್ ಮತ್ತು ದಿಗಂತ್ ಅವರಂತಹ ಕಲಾವಿದರೊಂದಿಗೆ ಅಭಿನಯಿಸುತ್ತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ.

ಇದು ನಿರ್ದೇಶಕ ಶಶಿಧರ್ ಅವರ ಮೂರನೇ ಚಿತ್ರವಾಗಿದ್ದು, 1980ರ ದಶಕದ ವಾತಾವರಣದಲ್ಲಿ ಸಾಗುವ ಸಂಪೂರ್ಣ ಕಾಮಿಡಿ ಹಾಗೂ ಎಂಟರ್ಟೈನರ್ ಆಗಿ ಚಿತ್ರ ರೂಪುಗೊಳ್ಳಲಿದೆ. ಶರಣ್, ದಿಗಂತ್ ಮತ್ತು ನಿಶ್ವಿಕಾ ನಾಯ್ಡು ಅವರ ಮೂರು ಪ್ರಮುಖ ಪಾತ್ರಗಳ ಸುತ್ತ ಕಥೆ ಸಾಗಲಿದೆ. ಕನ್ನಡ ಚಿತ್ರರಂಗದ ಹಲವು ಜನಪ್ರಿಯ ಕಲಾವಿದರು ಕೂಡ ಸಿನಿಮಾದ ಭಾಗವಾಗಲಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ದೀಪಕ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ತಮ್ಮ ಬಹುದಿನಗಳ ಕನಸಿನ ಕಥೆಯನ್ನು ಸಿನಿಮಾ ಮಾಡುವ ಪ್ರಯತ್ನಕ್ಕೆ ಪಿ.ಆರ್.ಎಫ್ ಸ್ಟುಡಿಯೋಸ್ ಆರ್ಥಿಕ ಬೆಂಬಲ ನೀಡುತ್ತಿದ್ದು, ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಲು ತಂಡ ನಿರ್ಧರಿಸಿದೆ ಎಂದು ಶಶಿಧರ್ ತಿಳಿಸಿದ್ದಾರೆ. ನಿರ್ಮಾಪಕಿ ವಿಂಧ್ಯಾ ಬಾಲಾಜಿ ಪೋತರಾಜ್ ಕೂಡ ಗಣೇಶ ಹಬ್ಬದ ಶುಭದಿನದಂದು ಸಿನಿಮಾ ಆರಂಭವಾಗಿರುವುದು ಸಂತಸ ತಂದಿದ್ದು, ಪ್ರೇಕ್ಷಕರ ಪ್ರೋತ್ಸಾಹ ಕೋರಿದ್ದಾರೆ.
