Television News
ನೂಪುರ್ ಶಿರಚ್ಛೇದ ಮಾಡುವಂತಿರೋ ವಿಡಿಯೋ ಮಾಡಿದ್ದ ಯುಟ್ಯೂಬರ್ ಸೆರೆ

ಶ್ರೀನಗರ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ತಲೆ ಕತ್ತರಿಸಿ ಎಸೆಯುವ ರೀತಿಯ ವಿಡಿಯೋ ಮಾಡಿ ಯುಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದ ವ್ಯಕ್ತಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಕಾಶ್ಮೀರದ ಯುಟ್ಯೂಬರ್ ಫೈಸಲ್ ವಾನಿ ಬಂಧಿತ ಆರೋಪಿ. ವಿಡಿಯೋದಲ್ಲಿ ಬರಿಮೈನಲ್ಲಿದ್ದ ಫೈಸಲ್ ವಾನಿ ಖಡ್ಗ ಝಳಪಿಸಿ ನೂಪುರ್ ಶರ್ಮಾ ಚಿತ್ರದ ತಲೆ ಕತ್ತರಿಸಿದ್ದ. ಈ ವಿಡಿಯೋ ಭಾರೀ ವೈರಲ್ ಆಗಿದ್ದು ಇದೀಗ ವಿಡಿಯೋ ಮಾಡಿದ್ದ ಆರೋಪಿಯನ್ನ ಬಂಧಿಸಲಾಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಹಳೆಯ ವಿಡಿಯೋ ಡಿಲೀಟ್ ಮಾಡಿದ ವಾನಿ ಹೊಸ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾನೆ. ವಿಡಿಯೋದಲ್ಲಿ ‘ನಾನೊಬ್ಬ ಅಮಾಯಕ. ಇಸ್ಲಾಂ ನನಗೆ ಎಲ್ಲಾ ಧರ್ಮವನ್ನೂ ಗೌರವಿಸುವುದನ್ನು ಹೇಳಿಕೊಟ್ಟಿದೆ. ಯಾರ ಭಾವನೆಗೂ ಧಕ್ಕೆ ಮಾಡುವ ಉದ್ದೇಶ ನನಗಿರಲಿಲ್ಲ. ವಿಡಿಯೋ ಮಾಡಿದ್ದು ನಾನೇ ಆದರೂ, ಯಾರಿಗೂ ನೋವು ಮಾಡುವ ಉದ್ದೇಶ ನನಗಿರಲಿಲ್ಲ’ ಎಂದು ಹೇಳಿಕೊಂಡಿದ್ದಾನೆ.
ವಾನಿ ಹಂಚಿಕೊಂಡಿರುವ ವಿಡಿಯೋದಲ್ಲಿ ‘ಸಾರ್ವಜನಿಕ ಶಾಂತಿಗೆ ಭಂಗ ತರುವಂತಿದ್ದು ಜನರಲ್ಲಿ ಭೀತಿ ಹುಟ್ಟಿಸುವಂತಿದೆ’ ಎಂದಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.
