Cinema News
ಆರ್.ಸಿ. ಸ್ಟುಡಿಯೋಸ್ “ಫಾದರ್” ಚಿತ್ರಕ್ಕೆ ಡಬ್ಬಿಂಗ್ ಪೂರ್ಣ

ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ಬಹು ನಿರೀಕ್ಷಿತ “ಫಾದರ್” ಚಿತ್ರದ ಮಾತಿನ ಜೋಡಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆರಂಭದಿಂದಲೇ ವಿಭಿನ್ನ ಕಥಾಹಂದರ ಮತ್ತು ಭಾವನಾತ್ಮಕ ಅಂಶಗಳಿಂದ ಕುತೂಹಲ ಹುಟ್ಟಿಸಿರುವ ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಪ್ರಕಾಶ್ ರಾಜ್ ಅವರು ಶ್ರೀರಂಗಪಟ್ಟಣದಲ್ಲಿರುವ ತಮ್ಮ ಸ್ಟುಡಿಯೋದಲ್ಲಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದು, ಚಿತ್ರದ ಕಾರ್ಯಗಳು ಅಂತಿಮ ಹಂತಕ್ಕೆ ಪ್ರವೇಶಿಸಿವೆ.
ಡಾರ್ಲಿಂಗ್ ಕೃಷ್ಣ ಅಭಿನಯದ “ಲವ್ ಮಾಕ್ಟೇಲ್ 3” ಭರ್ಜರಿ ಯಶಸ್ಸಿನ ಬಳಿಕ “ಫಾದರ್” ಚಿತ್ರದ ಮೇಲೆ ನಿರೀಕ್ಷೆಗಳು ಇನ್ನಷ್ಟು ಹೆಚ್ಚಾಗಿವೆ. ಚಿತ್ರದ ಪ್ರಚಾರ ಕಾರ್ಯವೂ ಈಗಾಗಲೇ ಆರಂಭಗೊಂಡಿದ್ದು, ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ತಂಡ ಸಜ್ಜಾಗಿದೆ. ಈಗಾಗಲೇ ಬಿಡುಗಡೆಯಾದ ಫಸ್ಟ್ ಲುಕ್ ಹಾಗೂ ಸುದೀಪ್ ಅನಾವರಣಗೊಳಿಸಿದ ಟೀಸರ್ ಸಿನಿಪ್ರಿಯರ ಮನ ಗೆದ್ದಿವೆ.

ಈ ಚಿತ್ರವು ತಂದೆ-ಮಗನ ಬಾಂಧವ್ಯದ ಸುತ್ತ ಹೆಣೆದ ಭಾವನಾತ್ಮಕ ಕಥೆಯಾಗಿದ್ದು, ಪ್ರೇಕ್ಷಕರನ್ನು ಮನಸೂರೆಗೊಳಿಸುವ ಪಯಣಕ್ಕೆ ಕರೆದೊಯ್ಯಲಿದೆ. “ಫಾದರ್” ಎಂಬ ಶೀರ್ಷಿಕೆಯೇ ಚಿತ್ರದ ಆಳವನ್ನು ಸೂಚಿಸುವಂತಿದ್ದು, ಪ್ರಕಾಶ್ ರಾಜ್ ಅವರ ಅಭಿನಯ ಚಿತ್ರದ ಮುಖ್ಯ ಆಕರ್ಷಣೆಯಾಗಲಿದೆ. ಡಾರ್ಲಿಂಗ್ ಕೃಷ್ಣ ಜೊತೆಗೆ ಅಮೃತಾ ಅಯ್ಯಂಗಾರ್ ಕೂಡ ಅಭಿನಯಿಸಿದ್ದು, ಅವರ ಜೋಡಿ ಮತ್ತೊಮ್ಮೆ ಗಮನ ಸೆಳೆಯಲಿದೆ.
ಚಂದ್ರು ನಿರ್ಮಾಣದ ಈ ಚಿತ್ರಕ್ಕೆ ವಿಶಿಷ್ಟ ಅಭಿಮಾನಿ ಬಳಗವಿದ್ದು, ಈ ಸಿನಿಮಾ ಮೇಲಿನ ನಿರೀಕ್ಷೆಗಳು ಹೆಚ್ಚಿವೆ. ಆನಂದ್ ಪಂಡಿತ್ ಅರ್ಪಣೆ, ಅಲಂಕಾರ್ ಪಾಂಡ್ಯನ್ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರವನ್ನು ರಾಜ್ ಮೋಹನ್ ನಿರ್ದೇಶಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಹಾಗೂ ನಕುಲ್ ಅಭಯಂಕರ್ ಸಂಗೀತ ಚಿತ್ರಕ್ಕೆ ವಿಶೇಷ ಮೆರುಗು ನೀಡಲಿವೆ.
