Cinema News
‘ಮೋಡ ಕವಿದ ವಾತಾವರಣ’ ಹೀರೋ ಟೀಸರ್ ರಿಲೀಸ್; ಹೊಸ ನಾಯಕನಿಗೆ ಸುನಿ ಸಾಥ್

ನಿರ್ದೇಶಕ ಸಿಂಪಲ್ ಸುನಿ ಅವರ ಹೊಸ ಚಿತ್ರ ‘ಮೋಡ ಕವಿದ ವಾತಾವರಣ’ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಇದೇ ತಿಂಗಳ 26ರಂದು ತೆರೆಗೆ ಬರುತ್ತಿರುವ ಈ ಸಿನಿಮಾದ ನಾಯಕನ ಟೀಸರ್ ಅನ್ನು ಬೆಂಗಳೂರಿನ ಎಸ್ಆರ್ವಿ ಚಿತ್ರಮಂದಿರದಲ್ಲಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಭಾಗವಹಿಸಿ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಈ ವೇಳೆ ಮಾತನಾಡಿದ ಸುನಿ, ತಮ್ಮ ವೃತ್ತಿಜೀವನದಲ್ಲಿ ಈ ಸಿನಿಮಾ ವಿಶೇಷ ಸ್ಥಾನ ಹೊಂದಿದೆ ಎಂದು ಹೇಳಿದರು. ಚಿತ್ರದ ಕಥೆಯಲ್ಲಿ ಚಿತ್ರಮಂದಿರದಲ್ಲೇ ಅನುಭವಿಸಬೇಕಾದ ಪ್ರಮುಖ ಅಂಶವಿರುವುದರಿಂದ, ಮುನ್ನೋಟ ಅಥವಾ ಟೀಸರ್ ಮೂಲಕ ಎಲ್ಲವನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು. ನಾಯಕ ಶೀಲಮ್ ಉತ್ತಮ ಅಭಿನಯ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಿರ್ಮಾಪಕರ ಬೆಂಬಲದಿಂದ ತಂಡದಲ್ಲಿ ಉತ್ತಮ ಉತ್ಸಾಹ ಮೂಡಿದೆ ಎಂದು ತಿಳಿಸಿದರು.

ಚಿತ್ರದ ನಾಯಕ ಶೀಲಮ್ ಮಾತನಾಡಿ, ಈ ಸಿನಿಮಾ ತಮ್ಮ ನಾಯಕನಾಗಿ ಮೊದಲ ಹೆಜ್ಜೆಯಾಗಿರುವುದರಿಂದ ವಿಶೇಷ ಭಾವನೆ ಇದೆ ಎಂದರು. ನಾಯಕನಾಗುವುದು ಕೇವಲ ಪ್ರತಿಭೆ ಅಥವಾ ಸಂಪತ್ತಿನಿಂದ ಸಾಧ್ಯವಾಗುವುದಿಲ್ಲ; ಅದಕ್ಕೆ ಅದೃಷ್ಟ ಮತ್ತು ಸರಿಯಾದ ಅವಕಾಶವೂ ಬೇಕು ಎಂದು ಹೇಳಿದರು. ತಮ್ಮ ಸಿನಿ ಪಯಣಕ್ಕೆ ದಿಕ್ಕು ತೋರಿದ ಸುನಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ನಿರ್ಮಾಪಕರು ಮತ್ತು ಇಡೀ ಚಿತ್ರತಂಡದ ಬೆಂಬಲವನ್ನು ಸ್ಮರಿಸಿದರು.

‘ಮೋಡ ಕವಿದ ವಾತಾವರಣ’ ಚಿತ್ರದ ಮೂಲಕ ಶೀಲಮ್ ಪೂರ್ಣ ಪ್ರಮಾಣದ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ವೈಜ್ಞಾನಿಕ ಕಾಲ್ಪನಿಕ ಪ್ರೇಮಕಥೆ ಹೊಂದಿರುವ ಈ ಸಿನಿಮಾದಲ್ಲಿ ಶೀಲಮ್ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ರಾಮ್ ಮೂವೀಸ್ ನಿರ್ಮಾಣದ ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ಹಾಗೂ ಆದಿತ್ಯ ಕಶ್ಯಪ್ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.
