Cinema News
ವೀರಭದ್ರ ದೇವರ ಇತಿಹಾಸ ಹೇಳುವ ‘ರುದ್ರಾಭಿಷೇಕಂ’ ಸೆ.25ಕ್ಕೆ ತೆರೆಗೆ

ವೀರಗಾಸೆಯಂತಹ ನಾಡಿನ ಸಾಂಪ್ರದಾಯಿಕ ಕಲೆಯನ್ನು ತಲೆತಲಾಂತರಗಳಿಂದ ಉಳಿಸಿಕೊಂಡು ಬಂದಿರುವ ಕುಟುಂಬದ ಕಥೆಯೊಂದಿಗೆ ವೀರಭದ್ರ ದೇವರ ಹಿನ್ನೆಲೆಯನ್ನು ಬೆಸೆದುಕೊಂಡಿರುವ ‘ರುದ್ರಾಭಿಷೇಕಂ’ ಚಿತ್ರ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್‌ನಡಿ ಮೂಡಿಬಂದಿರುವ ಈ ಚಿತ್ರ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ತಲುಪಲಿದೆ. ವಸಂತ್ ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ವಿಜಯ ರಾಘವೇಂದ್ರ ಮತ್ತು ಪ್ರಿಯಾಂಕಾ ತಿಮ್ಮೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಇಬ್ಬರೂ ದ್ವಿಪಾತ್ರಗಳಲ್ಲಿ ಅಭಿನಯಿಸಿರುವುದು ವಿಶೇಷ. ವಿಜಯ ರಾಘವೇಂದ್ರ ತಂದೆ ಹಾಗೂ ಮಗನಾಗಿ ಎರಡು ವಿಭಿನ್ನ ಶೇಡ್‌ಗಳ ಪಾತ್ರ ನಿರ್ವಹಿಸಿದರೆ, ಪ್ರಿಯಾಂಕಾ ತಿಮ್ಮೇಶ್ ಹಳ್ಳಿಯ ಶಿವಭಕ್ತೆಯಾಗಿ ಹಾಗೂ ನಗರ ಹುಡುಗಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಬಲ ರಾಜವಾಡಿ ಗೌಡ್ರು ಪಾತ್ರದಲ್ಲಿ ನಟಿಸಿದ್ದು, ವಿ. ಮನೋಹರ್, ಮನು, ಸನತ್, ಬುಲೆಟ್ ವಿನು, ಮಮತಾ ತುರುವೇಕೆರೆ, ನವನಿತಾ ಶೆಟ್ಟಿ, ಮಂಜುಳಾ ಸೇರಿದಂತೆ ಹಲವು ಕಲಾವಿದರು ಚಿತ್ರತಂಡದಲ್ಲಿದ್ದಾರೆ.

ಜನಪದ ಕಲೆ ಹಾಗೂ ದೈವದ ಹಿನ್ನೆಲೆಯನ್ನು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ಚಿತ್ರವನ್ನು ರೂಪಿಸಲಾಗಿದೆ ಎಂದು ನಿರ್ದೇಶಕ ವಸಂತ್ ಕುಮಾರ್ ತಿಳಿಸಿದ್ದಾರೆ. ಕಥೆಯ ಪ್ರಮುಖ ಕೇಂದ್ರಬಿಂದು ವೀರಭದ್ರ ದೇವರಾಗಿದ್ದು, ಅವರ ಆಗಮನದ ಹಿನ್ನೆಲೆ ಹಾಗೂ ಅದಕ್ಕೆ ಕಾರಣವಾದ ಘಟನೆಗಳನ್ನು ಸಿನಿಮಾ ತೆರೆದಿಡಲಿದೆ. ದೇವನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳ ಜತೆಗೆ ಗೋಕರ್ಣ, ಹೊನ್ನಾವರ, ಕುಮಟಾ, ಅಬ್ಬಕ್ಕ ಫೋರ್ಟ್ ಹಾಗೂ ಅಘನಾಶಿನಿ ಹಿನ್ನೀರಿನ ವಿಭಿನ್ನ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ಮಂಜುನಾಥ ಕೆ.ಎನ್., ಎನ್. ಜಯರಾಮಪ್ಪ, ಕೆ. ವೆಂಕಟೇಶ್, ಬಿ. ಚಿದಾನಂದ ಮೂರ್ತಿ, ಸುರೇಶ್ ಬಾಬು, ಬಿ.ಕೆ. ಅಶ್ವಥ್ ನಾರಾಯಣ, ಶಿವಕುಮಾರ್, ಕೆ.ಎಸ್. ರವಿಕುಮಾರ್ ಹಾಗೂ ಕುಸುಮ ವಸಂತ್ ಕುಮಾರ್ ಸೇರಿದಂತೆ ಒಂಬತ್ತು ಮಂದಿ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿ. ಮನೋಹರ್ ಸಂಗೀತ ಸಂಯೋಜಿಸಿದ್ದು, ಮುತ್ತುರಾಜ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಜನಪದ ಪರಂಪರೆ, ದೈವಿಕ ಹಿನ್ನೆಲೆ ಹಾಗೂ ಕೌಟುಂಬಿಕ ಕಥಾಹಂದರದೊಂದಿಗೆ ಮೂಡಿಬಂದಿರುವ ‘ರುದ್ರಾಭಿಷೇಕಂ’ ಸೆ.25ರಂದು ತೆರೆಗೆ ಬರಲು ಸಜ್ಜಾಗಿದೆ.
