Cinema News
ನಿರಂಜನ್ ಸುಧೀಂದ್ರ–ಪ್ರೇಮ್ ಕಾಂಬಿನೇಷನ್ನ ‘ಸ್ಪಾರ್ಕ್’; ಅಭಯ್ ವಸಿಷ್ಠ ಹೊಸ ಪರಿಚಯ

ಇದೇ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿರುವ ‘ಸ್ಪಾರ್ಕ್’ ಸಿನಿಮಾ ಬಿಡುಗಡೆಗೆ ಮುನ್ನವೇ ಕುತೂಹಲ ಮೂಡಿಸಿದೆ. ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಗದಗದಲ್ಲಿ ಉಪೇಂದ್ರ ಅವರಿಂದ ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ. ಇದೀಗ ಬೆಂಗಳೂರಿನಲ್ಲಿ ಮಾಧ್ಯಮಗಳಿಗಾಗಿ ಟ್ರೈಲರ್ ಪ್ರದರ್ಶಿಸಿದ ಚಿತ್ರತಂಡ, ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿರುವ ನವನಟ ಅಭಯ್ ವಸಿಷ್ಠ ಅವರನ್ನು ಪರಿಚಯಿಸಿತು. ಗರೀಮಾ–ಅವಿನಾಶ್ ವಸಿಷ್ಠ ದಂಪತಿ ನಿರ್ಮಿಸಿರುವ ‘ಸ್ಪಾರ್ಕ್’ನಲ್ಲಿ ಅವರ ಪುತ್ರ ಅಭಯ್ ವಸಿಷ್ಠ ಖಳನಟನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿದೇಶದಲ್ಲಿ ಹುಟ್ಟಿ ಬೆಳೆದಿರುವ ಅಭಯ್ ವಸಿಷ್ಠ ಅವರಿಗೆ ಕನ್ನಡ ಭಾಷೆಯ ಪರಿಚಯ ಸದ್ಯಕ್ಕೆ ಕಡಿಮೆ. ವಿದೇಶಿ ರಂಗಭೂಮಿಯಲ್ಲಿ ಅನುಭವ ಹೊಂದಿರುವ ಅವರು, ಕನ್ನಡ ಚಿತ್ರರಂಗದ ವಾತಾವರಣ ವಿಭಿನ್ನವಾಗಿದೆ ಎನ್ನುತ್ತಾರೆ. ನಾಯಕನಾಗಿ ಪರಿಚಯವಾಗುವ ಅವಕಾಶವಿದ್ದರೂ ಸದ್ಯ ಖಳನಟನ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ ಅಭಯ್, ಈ ಪಾತ್ರ ತಮಗೆ ತುಂಬಾ ಇಷ್ಟವಾಗಿದ್ದರಿಂದ ಒಪ್ಪಿಕೊಂಡಿರುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಹಾಗೂ ಇಲ್ಲಿನ ಸಿನಿಮಾರಂಗದ ಬಗ್ಗೆ ಹೆಚ್ಚಿನ ಜ್ಞಾನ ಪಡೆದುಕೊಂಡು ಕನ್ನಡದಲ್ಲಿ ನಾಯಕನಾಗಿ ನಟಿಸುವ ಕನಸಿದೆ ಎಂದು ತಿಳಿಸಿದರು. ನಾಯಕ ನಿರಂಜನ್ ಸುಧೀಂದ್ರ ಕೂಡ ಅಭಯ್ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದು, ಆ್ಯಕ್ಷನ್ ದೃಶ್ಯಗಳಲ್ಲಿ ಅವರ ಎತ್ತರ ಹಾಗೂ ದೇಹದಾರ್ಢ್ಯ ಪಾತ್ರಕ್ಕೆ ಉತ್ತಮವಾಗಿ ಹೊಂದಿಕೆಯಾಗಿದೆ ಎಂದರು. ವಿದೇಶದಿಂದ ಬಂದಿದ್ದರೂ ಅಭಯ್ ಉತ್ತಮವಾಗಿ ನಟಿಸಿದ್ದು, ಪ್ರೇಕ್ಷಕರಿಗೆ ಪರದೆಯ ಮೇಲೆ ಒಬ್ಬ ಪ್ರತಿಭಾವಂತ ಕಲಾವಿದನ ಪರಿಚಯವಾಗಲಿದೆ ಎಂದು ಹೇಳಿದರು.

‘ಸ್ಪಾರ್ಕ್’ ಭ್ರಷ್ಟಾಚಾರದ ವಿರುದ್ಧದ ಕಥೆಯನ್ನು ಹೊಂದಿದ್ದರೂ, ಚಿತ್ರವನ್ನು ಸಂಪೂರ್ಣ ಮನರಂಜನೆಯೊಂದಿಗೆ ಕಟ್ಟಿಕೊಡಲಾಗಿದೆ ಎಂದು ನಿರಂಜನ್ ಸುಧೀಂದ್ರ ಹೇಳಿದರು. ತಮ್ಮ ಪಾತ್ರ ಸೇರಿದಂತೆ ಸಿನಿಮಾದ ಒಟ್ಟಾರೆ ಕಥೆ ನೋಡಿದಾಗ ಇದು ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಯಶಸ್ಸು ತಂದುಕೊಡಲಿದೆ ಎಂಬ ವಿಶ್ವಾಸ ಮೂಡಿದೆ ಎಂದರು. ನಿರ್ದೇಶಕ ಮಹಾಂತೇಶ್ ಹಂದ್ರಾಳ್ ಮಾತನಾಡಿ, ಸಿನಿಮಾ ಮಾಡಲು ತಮಗೆ ಬೇಕಾದ ಕಲಾವಿದರನ್ನು ನಿರ್ಮಾಪಕರು ಯಾವುದೇ ಕೊರತೆಯಿಲ್ಲದೆ ಒದಗಿಸಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಆ ಬೆಂಬಲದಿಂದಲೇ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲವ್ಲಿ ಸ್ಟಾರ್ ಪ್ರೇಮ್, ಹೊಸಬರ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿರುವ ನಿರ್ಮಾಪಕರ ಪ್ರಯತ್ನವನ್ನು ಶ್ಲಾಘಿಸಿದರು. ಚಿತ್ರದಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದು, ಪಾತ್ರಕ್ಕೆ ಸ್ಟೈಲಿಷ್ ಲುಕ್ ನೀಡಲು ಪ್ರಯತ್ನಿಸಿರುವುದಾಗಿ ಹೇಳಿದರು.

ಹಾಸ್ಯನಟ ಧರ್ಮಣ್ಣ ಕಡೂರು ಅವರ ಪ್ರಕಾರ, ‘ಸ್ಪಾರ್ಕ್’ನಲ್ಲಿ ನಿರಂಜನ್ ಸುಧೀಂದ್ರ ಮತ್ತು ಪ್ರೇಮ್ ಪ್ರಮುಖ ಆಕರ್ಷಣೆಗಳಾಗಿದ್ದಾರೆ. ನಿರಂಜನ್ ಜೊತೆ ತಾವೂ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗಿಸುವ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ವಿಶ್ವಾಸ್ ಎಂ. ನಾಯರ್ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು. ಗರೀಮಾ–ಅವಿನಾಶ್ ವಸಿಷ್ಠ ನಿರ್ಮಾಣದ ಈ ಚಿತ್ರಕ್ಕೆ ಮಹಾಂತೇಶ್ ಹಂದ್ರಾಳ್ ನಿರ್ದೇಶನವಿದ್ದು, ಸೆಪ್ಟೆಂಬರ್ 25ರಂದು ‘ಸ್ಪಾರ್ಕ್’ ಪ್ರೇಕ್ಷಕರ ಮುಂದೆ ಬರಲಿದೆ.
