Cinema News
ದರ್ಶನ್ ಪ್ರೇರಣೆಯಿಂದ ಸಿನಿಮಾಗೆ ಬಂದ ಮಂಡ್ಯದ ಯುವ ರೈತ ಚೇತನ್

ಮಂಡ್ಯದ ಯುವ ರೈತ ಚೇತನ್ ಈಗ ‘ದೇವಿ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಹಲವು ಪ್ರಯತ್ನಗಳ ಬಳಿಕ ಮತ್ತೆ ಚಿತ್ರರಂಗದಲ್ಲಿ ಸಾಧಿಸಬೇಕು ಎಂಬ ದೃಢ ಸಂಕಲ್ಪದೊಂದಿಗೆ ಅವರು ಈ ಸಿನಿಮಾ ಆರಂಭಿಸಿದ್ದಾರೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಭವ್ಯಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
‘ದೇವಿ’ ಚಿತ್ರದ ಟ್ಯಾಗ್‌ಲೈನ್ “ಅಮ್ಮ ಅಂದ್ರೆ ತುಪ್ಪ… ಅಮ್ಮನ್ ಅಂದ್ರೆ ಹಾಲು ತುಪ್ಪ” ಎಂಬ ವಿಶೇಷ ಅಡಿ ಬರಹದೊಂದಿಗೆ ಗಮನ ಸೆಳೆಯುತ್ತಿದೆ. ಹಿರಿಯ ನಿರ್ಮಾಪಕ ಕರಿ ಸುಬ್ಬು, ನಟ ಶಿವರಾಜ್ ಕೆ.ಆರ್. ಪೇಟೆ, ಹುಲಿ ಕಾರ್ತಿಕ್ ಹಾಗೂ ಸಂಭಾಷಣಾಕಾರ ಮಾಸ್ತಿ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಚಿತ್ರದ ತಂಡಕ್ಕೆ ಶುಭ ಹಾರೈಸಿದ್ದಾರೆ.

ಈ ಹಿಂದೆ ಸಿನಿಮಾ ಮಾಡುವ ಪ್ರಯತ್ನದಲ್ಲಿ ನಿರಾಸೆ ಅನುಭವಿಸಿದ್ದ ಚೇತನ್, ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನದ ಬಳಿಕ ಹೊಸ ಕಥೆಯ ಕಲ್ಪನೆ ಮೂಡಿತು ಎಂದು ಹೇಳಿದರು. ದೇವಾಲಯದ ಎದುರೇ ‘ದೇವಿ’ ಎಂಬ ಶೀರ್ಷಿಕೆ ಮನಸ್ಸಿಗೆ ಬಂದಿದ್ದು, ಕಥೆಯನ್ನು ವಾಣಿಜ್ಯ ಮಂಡಳಿಗೆ ವಿವರಿಸಿದ ಬಳಿಕ ಶೀರ್ಷಿಕೆ ಸಿಕ್ಕಿತು ಎಂದು ಅವರು ತಿಳಿಸಿದರು. ಹಳ್ಳಿಯಿಂದ ನಗರಕ್ಕೆ ಬರುವ ಯುವಕನ ಜೀವನ, ತಾಯಿಯ ಮೇಲಿನ ಭಕ್ತಿ ಹಾಗೂ ಆಕ್ಷನ್ ಅಂಶಗಳನ್ನು ಒಳಗೊಂಡ ಕಥೆಯಾಗಿದ್ದು, ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ ಎಂದರು.

ಚಿತ್ರರಂಗಕ್ಕೆ ಬರಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವ್ಯಕ್ತಿತ್ವ ಹಾಗೂ ಅಭಿಮಾನವೇ ಪ್ರಮುಖ ಪ್ರೇರಣೆ ಎಂದು ಚೇತನ್ ಹೇಳಿದರು. ಚಿತ್ರಕ್ಕಾಗಿ ವಿಶೇಷ ನಟನೆ ಹಾಗೂ ನೃತ್ಯ ತರಬೇತಿ ಪಡೆಯುತ್ತಿದ್ದು, ಮೋಹನ್ ಮತ್ತು ರುದ್ರ ಮಾಸ್ಟರ್ ಮಾರ್ಗದರ್ಶನ ನೀಡುತ್ತಿದ್ದಾರೆ. ಸಂಭಾಷಣಾಕಾರ ಮಾಸ್ತಿ ಕೂಡ ಚಿತ್ರದ ಕಥೆಗೆ ತಕ್ಕಂತೆ ವಿಭಿನ್ನ ಡೈಲಾಗ್‌ಗಳನ್ನು ಬರೆಯಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
