Cinema News
ಆಕ್ಷನ್ ಅಬ್ಬರದ ‘ಪರಾಕ್’ ಟೀಸರ್ ರಿಲೀಸ್; ರಗಡ್ ಲುಕ್‌ನಲ್ಲಿ ಮಿಂಚಿದ ಶ್ರೀಮುರಳಿ

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ‘ಪರಾಕ್’ ಚಿತ್ರದ ಟೀಸರ್ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ಹೊಸ ಪ್ರತಿಭೆಗಳ ತಂಡ ಕೈಜೋಡಿಸಿರುವ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಬಿಡುಗಡೆಯಾದ ಟೀಸರ್ ಆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರತಂಡ ಟೀಸರ್ ಅನಾವರಣಗೊಳಿಸಿತು.
ಈ ವೇಳೆ ಮಾತನಾಡಿದ ನಿರ್ದೇಶಕ ಹಾಲೇಶ್ ಕೋಗುಂಡಿ, “ಇದು ಕೇವಲ ಟೀಸರ್ ಮಾತ್ರ. ಸಿನಿಮಾದಲ್ಲಿ ಇನ್ನೂ ಅನೇಕ ಅಚ್ಚರಿಯ ಅಂಶಗಳಿವೆ. ಶ್ರೀಮುರಳಿ ಅವರೊಂದಿಗೆ ಕೆಲಸ ಮಾಡಿದ ಅನುಭವ ಸಂತೋಷ ತಂದಿದ್ದು, ಪ್ರೇಕ್ಷಕರು ಇದೇ ರೀತಿ ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ನಟ ಶ್ರೀಮುರಳಿ ಮಾತನಾಡಿ, ‘ಪರಾಕ್’ ಸುಲಭವಾಗಿ ರೂಪುಗೊಂಡ ಸಿನಿಮಾ ಅಲ್ಲ ಎಂದು ಹೇಳಿದರು. ಟೀಸರ್ ಹಿಂದಿರುವ ಪರಿಶ್ರಮ ಅಪಾರವಾಗಿದ್ದು, ಅದರ ನಿರ್ಮಾಣಕ್ಕೆ ಎರಡೂವರೆ ವರ್ಷಗಳ ಕಾಲ ಶ್ರಮಪಟ್ಟಿದ್ದೇವೆ. ಕಥೆಯ ಅಭಿವೃದ್ಧಿಗೆ ಸುಮಾರು ಮೂರೂವರೆ ವರ್ಷ ಮೀಸಲಿಟ್ಟಿದ್ದೇವೆ. ಹೊಸ ನಿರ್ದೇಶಕ ಮತ್ತು ಹೊಸ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ ಮಾಡಲು ಕಾರಣ ಅವರ ಹೊಸ ಆಲೋಚನೆಗಳು ಹಾಗೂ ಉತ್ಸಾಹವೇ ಎಂದು ತಿಳಿಸಿದ ಅವರು, ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ದೊಡ್ಡ ಆಸ್ತಿ ಎಂದರು. ಚಿತ್ರದ ಚಿತ್ರೀಕರಣ ಇನ್ನೂ ಮುಂದುವರಿದಿದೆ ಎಂದೂ ಮಾಹಿತಿ ನೀಡಿದರು.

ಟೀಸರ್‌ನಲ್ಲಿ ಶ್ರೀಮುರಳಿ ಸಿಕ್ಸ್ ಪ್ಯಾಕ್ ಲುಕ್ ಹಾಗೂ ಭರ್ಜರಿ ಆಕ್ಷನ್ ದೃಶ್ಯಗಳ ಮೂಲಕ ಗಮನ ಸೆಳೆಯುತ್ತಾರೆ. ಚರಣ್ ರಾಜ್ ಅವರ ಸಂಗೀತ, ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಹಾಗೂ ಹಾಲೇಶ್ ಕೋಗುಂಡಿ ಅವರ ನಿರೂಪಣೆ ಟೀಸರ್‌ಗೆ ವಿಶೇಷ ಮೆರುಗು ನೀಡಿದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಡಾ. ಕೆ. ರವಿವರ್ಮ ಸಾಹಸ ನಿರ್ದೇಶನ, ರಕ್ಷಿತ್ ಕಾಪ್ ಸಂಕಲನ ಮತ್ತು ಮಂಜುನಾಥ್ ಟಿ, ಮೋಹನ್ ಕೆ.ಓ ಹಾಗೂ ಹಾಲೇಶ್ ಕೋಗುಂಡಿ ಸಂಭಾಷಣೆ ಬರೆದಿದ್ದಾರೆ. ಸದ್ಯ ಚಿತ್ರದ ಸುಮಾರು 35 ಶೇಕಡಾ ಚಿತ್ರೀಕರಣ ಪೂರ್ಣಗೊಂಡಿದೆ.
