Cinema News
ಟ್ರೇಲರ್‌ನಲ್ಲೇ ಗಮನ ಸೆಳೆದ ಎಂ.ಎನ್. ಸುರೇಶ್ ನಿರ್ದೇಶನದ “ಕ್ಷಮೆಯಿರಲಿ ತಂದೆ”

ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ತಮ್ಮದೇ ಆದ ಛಾಪು ಮೂಡಿಸಿರುವ ಎಂ.ಎನ್. ಸುರೇಶ್ (ಮೂಗ್ ಸುರೇಶ್) ಇದೀಗ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಹೊಸ ಪಯಣ ಆರಂಭಿಸಿದ್ದಾರೆ. ಅವರ ಮೊದಲ ನಿರ್ಮಾಣ ಮತ್ತು ನಿರ್ದೇಶನದ ಚಿತ್ರ “ಕ್ಷಮೆಯಿರಲಿ ತಂದೆ” ಆಗಿದ್ದು, ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಸಿನಿಮಾ ಜೂನ್ 12ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್, ಟ್ರೇಲರ್ ಹಾಗೂ ಲಿರಿಕಲ್ ವಿಡಿಯೋ ಅನಾವರಣಗೊಂಡಿದ್ದು, ಟ್ರೇಲರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ಮೇಕಪ್ ಕಲಾವಿದ ರಾಮಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಅನಾವರಣಗೊಳಿಸಿದ ಅವರು, ಸಿನಿಮಾ ಯಶಸ್ವಿಯಾಗಲಿ ಹಾಗೂ ಎಂ.ಎನ್. ಸುರೇಶ್ ನಿರ್ಮಾಪಕ-ನಿರ್ದೇಶಕರಾಗಿಯೂ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಂ.ಎನ್. ಸುರೇಶ್, ಈ ಹಿಂದೆ ಕೆಲವು ಚಿತ್ರಗಳಿಗೆ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದರೂ, ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಇದು ಮೊದಲ ಪ್ರಯತ್ನ ಎಂದು ಹೇಳಿದರು. ಸ್ನೇಹಿತರ ಪ್ರೋತ್ಸಾಹದಿಂದಲೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದು, ತಮ್ಮದೇ ಉಳಿತಾಯದ ಹಣವನ್ನು ಹೂಡಿ ಚಿತ್ರ ನಿರ್ಮಿಸಿರುವುದಾಗಿ ತಿಳಿಸಿದರು. ಕುಟುಂಬದ ಬೆಂಬಲದಿಂದ ಈ ಕನಸು ನನಸಾಗಿದೆ ಎಂದ ಅವರು, ಚಿತ್ರದ ಕಥೆ ತಂದೆ ಮತ್ತು ಮಗನ ನಡುವಿನ ಭಾವನಾತ್ಮಕ ಸಂಬಂಧವನ್ನು ಆಧರಿಸಿದೆ ಎಂದು ಹೇಳಿದರು.

ಹರೀಶ್ ಕಥೆ ಬರೆದಿರುವ ಈ ಚಿತ್ರದಲ್ಲಿ ಮಂಜುನಾಥ್ ಹೆಗ್ಡೆ, ರೇಣುಕಾಬಾಲಿ, ಶ್ರೀಮಂತ, ವಿನ್ಯಾ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದು, ಎಂ.ಎನ್. ಸುರೇಶ್ ಅವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೂರ್ಯಕಾಂತ್ ಛಾಯಾಗ್ರಹಣ, ಮುತ್ತುರಾಜ್ ಸಂಕಲನ ಹಾಗೂ ಪುಣ್ಯೇಶ್ ಕುಮಾರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪತ್ರಿಕಾಗೋಷ್ಠಿಯಲ್ಲಿ ನಟ ಶ್ರೀಮಂತ್, ಕಥೆಗಾರ ಹರೀಶ್, ಸಂಕಲನಕಾರ ಮುತ್ತುರಾಜ್, ಶಿವಕುಮಾರ್ ಆರಾಧ್ಯ ಹಾಗೂ ಕಾರ್ಯಕಾರಿ ನಿರ್ಮಾಪಕಿ ಅಹಲ್ಯ ಸುರೇಶ್ ಉಪಸ್ಥಿತರಿದ್ದರು.
