Television News
ಕಾಶ್ಮೀರಿ ಪಂಡಿತರದ್ದು ನರಮೇಧವಾದರೆ, ಜೈಶ್ರೀರಾಮ್ ಹೆಸರಲ್ಲಿ ಮುಸ್ಲಿಂರ ಮೇಲೆ ನಡಿತಿರೋದೇನು? ಸಾಯಿ ಪಲ್ಲವಿ

ಸಿಂಪಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಯಾವುದೇ ಸಿನಿಮಾದಲ್ಲಿ ನಟಿಸಬೇಕು ಅಂದ್ರೆ ಅಳೆದು ತೂಗಿ ಯೋಚನೆ ಮಾಡ್ತಾರೆ. ಪಾತ್ರದಲ್ಲಿ ಗಟ್ಟಿತನವಿಲ್ಲದಿದ್ರೆ ಆ ಸಿನಿಮಾದಲ್ಲಿ ನಟಿಸೋದೆ ಇಲ್ಲ. ಪಾತ್ರಗಳಲ್ಲಿ ಗಟ್ಟಿತನ ಹುಡುಕುವ ಸಾಯಿ ಪಲ್ಲವಿ ರಿಯಲ್ ಲೈಫ್ ನಲ್ಲೂ ಗಟ್ಟಿಗಿತ್ತಿಯೇ.
ಸಾಯಿ ಪಲ್ಲವಿ ನಟಿಸಿರುವ ‘ವಿರಾಟ ಪರ್ವಂ’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ನಕ್ಸಲ್ ನಾಯಕನನ್ನು ಪ್ರೀತಿಸುವ ಯುವತಿಯ ಪಾತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಇದೀಗ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿ ಸಾಯಿ ಪಲ್ಲವಿ ಭಾಗವಹಿಸುತ್ತಿದ್ದು, ಪ್ರಚಾರ ಸಂಬಂಧ ಪಾಲ್ಗೊಂಡಿದ್ದ ಸಂದರ್ಶನವೊಂದರಲ್ಲಿ ಕಾಶ್ಮೀರಿ ಫೈಲ್ಸ್ ಮತ್ತು ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಿದ್ದಾರೆ.
ಅರಣ್ಯದಲ್ಲಿ ಗನ್ ಹಿಡಿದು ನಟಿಸಿದ್ದು ಹೇಗನಿಸಿತು ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಾಯಿ ಪಲ್ಲವಿ, ”ಅದೊಂದು ಐಡಿಯಾಲಜಿ. ಶಾಂತಿ ಎಂದರೇನು ಎಂಬ ಬಗ್ಗೆ ನಿಮಗೆ ಒಂದು ಅಭಿಪ್ರಾಯ ಇರಬಹುದು. ಹಿಂಸೆ ಎಂದರೆ ಸಂಹವನದ ಅತಿ ತಪ್ಪು ದಾರಿ ಎಂದು ನಾನು ಭಾವಿಸಿದ್ದೇನೆ. ಹಿಂಸಾತ್ಮಕವಾಗಿ ನಾನು ಏನನ್ನಾದರು ಸಾಧಿಸುತ್ತೇನೆ ಎಂಬುದನ್ನು ನಾನು ಒಪ್ಪುವುದಿಲ್ಲ. ಆದರೆ ಆ ಸಮಯದಲ್ಲಿ ನಕ್ಸಲರು ತಮ್ಮ ಕಷ್ಟಗಳನ್ನು ಯಾರಿಗೆ ಹೇಗೆ ಅರಿಕೆ ಮಾಡಬೇಕೆಂಬುದು ಅರಿಯದೆ, ಅಥವಾ ನ್ಯಾಯ ಸರಿಯಾದ ದಾರಿಯಲ್ಲಿ ಧಕ್ಕದಾಗ ಒಂದು ಗುಂಪು ಮಾಡಿಕೊಂಡರು. ನಾವು ಜನರಿಗೆ ಒಳ್ಳೆಯದು ಮಾಡುತ್ತೇವೆ ಎಂದುಕೊಂಡರು. ಅವರು ಮಾಡಿದ್ದು ಸರಿಯಾ ತಪ್ಪಾ ನಾವೀಗ ನಿರ್ಣಯ ಮಾಡುವುದು ಸೂಕ್ತವಲ್ಲವೇನೋ” ಎಂದರು.
ಎಡಪಂಥೀಯ ಹೋರಾಟಗಳಲ್ಲಿ ಭಾಗವಹಿಸಿದ್ದೀರ? ಹತ್ತಿರದಿಂದ ಗಮನಿಸಿದ್ದೀರ? ಎಂಬ ಪ್ರಶ್ನೆಗೆ ಉತ್ತರಿಸಿರುವ ಸಾಯಿ ಪಲ್ಲವಿ, ”ನಾನು ಬೆಳೆದ ಕುಟುಂಬ ಬಹಳ ನ್ಯೂಟ್ರಲ್ ಆದದ್ದು. ಎಡ ಅಥವಾ ಬಲಪಂಥೀಯ ಆಲೋಚನೆಯುಳ್ಳ ಕುಟುಂಬದ ನನ್ನದಲ್ಲ. ಹಾಗಾಗಿ ನನ್ನ ಮೇಲೆ ಯಾವುದರ ಪ್ರಭಾವ ಇಲ್ಲ. ನನ್ನ ಕುಟುಂಬ ಹೇಳಿಕೊಟ್ಟಿರುವುದು ನೀನು ಒಳ್ಳೆಯ ವ್ಯಕ್ತಿಯಾಗಿರಬೇಕು. ಯಾರೋ ಒಬ್ಬರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದರೆ ನೀನು ಆ ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಪರವಾಗಿ ನಿಲ್ಲು ಎಂದು ಹೇಳಿಕೊಟ್ಟಿದ್ದಾರೆ. ನಾನು ಹಾಗೆಯೇ ಬೆಳೆದಿದ್ದೀನಿ” ಎಂದರು.
ಕೆಲವು ದಿನಗಳ ಮುಂದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಂತು ಅದರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಹೇಗೆ ಹಿಂಸೆ ಮಾಡಲಾಯಿತು ಎಂದು ಅವರು ತೋರಿಸಿದ್ದಾರೆ. ಹಾಗೆ ಕಳೆದ ವರ್ಷವೇ ಇರಬೇಕು ಕೋವಿಡ್ ಸಮಯದಲ್ಲಿ ವ್ಯಕ್ತಿಯೊಬ್ಬ ಗಾಡಿಯಲ್ಲಿ ಹಸು ತೆಗೆದುಕೊಂಡು ಹೋಗುತ್ತಿದ್ದ. ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಲಾಯಿತು. ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇದನ್ನು ನೋಡಿದಾಗ ಆಗ ಕಾಶ್ಮೀರದಲ್ಲಿ ನಡೆದಿದ್ದಕ್ಕೂ ಈಗ ನಡೆದಿದ್ದಕ್ಕೂ ವ್ಯತ್ಯಾಸ ಕಾಣಿಸುತ್ತಿಲ್ಲ” ಎಂದಿದ್ದಾರೆ.
