Television News
ಮಹಾ ಜನತೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆಂಬ ವಿಶ್ವಾಸವಿದೆ: ಠಾಕ್ರೆ ಪರ ನಿಂತ ನಟ ಪ್ರಕಾಶ್ ರೈ

ಬೆಂಗಳೂರು: ಸಾಕಷ್ಟು ಹೈಡ್ರಾಮಾದ ಬಳಿಕ ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡಿದೆ. ಮಹಾರಾಷ್ಟ್ರ ಸರ್ಕಾರ ಇಂದು ವಿಶ್ವಾಸ ಮತ ಯಾಚನೆ ಮಾಡಬೇಕಿತ್ತು. ಆದರೆ ಅದಕ್ಕೂ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ್ದನ್ನು ನಟ ಪ್ರಕಾಶ್ ರಾಜ್ ಶ್ಲಾಘಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಉದ್ಧವ್ ಠಾಕ್ರೆ ಸರ್. ನೀವು ರಾಜ್ಯವನ್ನು ನಿಭಾಯಿಸಿದ ರೀತಿಗೆ ಮಹಾರಾಷ್ಟ್ರದ ಜನರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.
ಚಾಣಕ್ಯರು ಇಂದು ಲಡ್ಡುಗಳನ್ನು ತಿನ್ನಬಹುದು. ಆದರೆ ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯುತ್ತದೆ. ನಿಮಗೆ ಹೆಚ್ಚು ಶಕ್ತಿಯನ್ನೂ ನೀಡಲಿದೆ ಎಂದು ಠಾಕ್ರೆ ನಿಲುವನ್ನು ಸ್ವಾಗತಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿ ವಿರುದ್ಧ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಿವಸೇನಾ ಶಾಸಕರು ಬಂಡಾಯ ಎದ್ದಿದ್ದಾರೆ. ಶಿಂಧೆ ಬಣದಲ್ಲಿ ಶಿವಸೇನಾ ಬಂಡಾಯ ಶಾಸಕರು 40 ಮಂದಿ ಇದ್ದಾರೆ ಎನ್ನಲಾಗಿದೆ. ಪಕ್ಷೇತರರು ಸೇರಿ 50 ಬಂಡಾಯ ಶಾಸಕರಿದ್ದಾರೆ.
