Cinema News
ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿ ಪಯಣಕ್ಕೆ 14 ವರ್ಷದ ಸಂಭ್ರಮ

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ನಟಿ ರಚಿತಾ ರಾಮ್ ಅವರ ಸಿನಿ ಪಯಣಕ್ಕೆ ಇದೀಗ 14 ವರ್ಷದ ಸಂಭ್ರಮ. ಹಲವು ನಟಿಯರು ಬಂದು ಹೋಗುವ ಚಿತ್ರರಂಗದಲ್ಲಿ, ದಶಕಕ್ಕೂ ಹೆಚ್ಚು ಕಾಲ ತಮ್ಮದೇ ಆದ ಸ್ಥಾನ, ಕ್ರೇಜ್ ಮತ್ತು ಗ್ಲಾಮರ್ ಉಳಿಸಿಕೊಂಡಿರುವ ಕೆಲವೇ ನಟಿಯರಲ್ಲಿ ರಚಿತಾ ರಾಮ್ ಪ್ರಮುಖರು. “ಬುಲ್ ಬುಲ್” ಚಿತ್ರದ ಮೂಲಕ ಸಿನಿರಂಗಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಅವರು ಇಂದಿಗೂ ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯಾಗಿ ಮುಂದುವರಿದಿದ್ದಾರೆ.
ಕಿರುತೆರೆಯ “ಅರಸಿ” ಧಾರಾವಾಹಿಯಿಂದ ವಿಂದ್ಯಾ ರಾಮ್ ಆಗಿ ಪರಿಚಿತರಾಗಿದ್ದ ಅವರು, “ಬುಲ್ ಬುಲ್” ಚಿತ್ರದ ನಂತರ ರಚಿತಾ ರಾಮ್ ಎಂಬ ಹೆಸರಿನಲ್ಲಿ ಸಿನಿಪ್ರಿಯರ ಮನ ಗೆದ್ದರು. ನಟ ದರ್ಶನ್ ಜೊತೆಗೆ ಮೊದಲ ಸಿನಿಮಾದಲ್ಲೇ ಅಭಿನಯಿಸುವ ಅವಕಾಶ ಸಿಕ್ಕಿದ್ದು ಆ ಸಮಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಳಿಕ ಅದೇ ಸಿನಿಮಾ ಅವರ ಬದುಕಿನ ದೊಡ್ಡ ತಿರುವಾಗಿ ಪರಿಣಮಿಸಿ, ರಚಿತಾ ರಾಮ್ ಅವರನ್ನು ಸ್ಟಾರ್ ನಟಿಯಾಗಿ ಸ್ಥಾಪಿಸಿತು.

ರಚಿತಾ ರಾಮ್ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್ ಸೇರಿದಂತೆ ಹಲವರ ಜೊತೆ ಅಭಿನಯಿಸಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇದೀಗ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ “ಕೂಲಿ” ಸಿನಿಮಾದಲ್ಲೂ ವಿಶೇಷ ಪಾತ್ರದ ಮೂಲಕ ಪರಭಾಷೆಯಲ್ಲೂ ಗಮನ ಸೆಳೆಯುತ್ತಿದ್ದಾರೆ.

14 ವರ್ಷದ ಈ ವಿಶೇಷ ಸಂದರ್ಭದಲ್ಲಿ ಅಭಿಮಾನಿಗಳು ರಚಿತಾ ರಾಮ್ ಅವರಿಗೆ ಶುಭಾಶಯಗಳ ಸುರಿಮಳೆ ಹರಿಸುತ್ತಿದ್ದಾರೆ. ಸದ್ಯ ಅವರು ಧ್ರುವ ಸರ್ಜಾ ಜೊತೆಗೆ “ಕ್ರಿಮಿನಲ್”, ಸತೀಶ್ ನೀನಾಸಂ ಜೊತೆ “ಅಯೋಗ್ಯ 2” ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆಯುತ್ತಿದ್ದು, ತೆಲುಗಿನಲ್ಲಿ ಎರಡು ಹೊಸ ಸಿನಿಮಾಗಳು ಶೀಘ್ರದಲ್ಲೇ ಘೋಷಣೆಯಾಗಲಿವೆ.
