Television News
ಸಾಯಿ ಪಲ್ಲವಿ ವಿರುದ್ಧ ರಾಜ್ಯದಾದ್ಯಂತ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಿಸಬೇಕು: ಬಿಜೆಪಿ ಶಾಸಕ ರಾಜಾ ಸಿಂಗ್

ನಟಿ ಸಾಯಿ ಪಲ್ಲವಿ ನೀಡಿದ ಹೇಳಿಕೆಯೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಇದೀಗ ಸಾಯಿ ಪಲ್ಲವಿ ತಾವು ನೀಡಿದ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕ್ಕಿದ್ದು ನಟಿಯನ್ನು ಬಂಧಿಸುವಂತೆ ಬಿಜೆಪಿ ಶಾಸಕ ರಾಜಾ ಸಿಂಗ್ ಒತ್ತಾಯಿಸಿದ್ದಾರೆ.
‘ವಿರಾಟ ಪರ್ವಂ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಯಿ ಪಲ್ಲವಿ, ನಕ್ಸಲ್ ವಾದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ”ಪಾಕಿಸ್ತಾನದ ಸೈನಿಕರು, ನಮ್ಮ ದೇಶದ ಸೈನಿಕರನ್ನು ಶತ್ರುಗಳೆಂದು, ಭಯೋತ್ಪಾದಕರೆಂದು ಭಾವಿಸುತ್ತಾರೆ. ಏಕೆಂದರೆ ನಾವು ಈ ಕಡೆ ಇದ್ದೇವೆ, ನಮ್ಮ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಭಯೋತ್ಪಾದಕರು, ವೈರಿಗಳು ಎಂದುಕೊಳ್ಳುತ್ತಾರೆ. ಹೀಗೆ ದೃಷ್ಟಿಕೋನಗಳು ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ಬದಲಾಗಿಬಿಡುತ್ತವೆ” ಎಂದಿದ್ದರು.
ಕೆಲವು ದಿನಗಳ ಮುಂದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಹೇಗೆ ಹಿಂಸೆ ಮಾಡಲಾಯಿತು ಎಂಬುದನ್ನು ತೋರಿಸಲಾಗಿತ್ತು. ಅದೇ ರೀತಿ ಕಳೆದ ವರ್ಷ ಕೋವಿಡ್ ಸಮಯದಲ್ಲಿ ವ್ಯಕ್ತಿಯೊಬ್ಬ ಗಾಡಿಯಲ್ಲಿ ಹಸು ತೆಗೆದುಕೊಂಡು ಹೋಗುತ್ತಿದ್ದ. ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ನಡೆಸಿ, ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇದನ್ನು ನೋಡಿದಾಗ ಆಗ ಕಾಶ್ಮೀರದಲ್ಲಿ ನಡೆದಿದ್ದಕ್ಕೂ ಈಗ ನಡೆದಿದ್ದಕ್ಕೂ ವ್ಯತ್ಯಾಸ ಕಾಣಿಸುತ್ತಿಲ್ಲ” ಎಂದಿದ್ದರು. ಇದೀಗ ಸಾಯಿ ಪಲ್ಲವಿಯ ಈ ಹೇಳಿಕೆ ಸಾಕಷ್ಟು ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ.
ಸಾಯಿ ಪಲ್ಲವಿ ಹೇಳಿಕೆಯನ್ನು ಹಲವರು ಖಂಡಿಸಿದ್ದು, ಸಾಕಷ್ಟು ಮಂದಿ ಸಾಯಿ ಪಲ್ಲವಿಗೆ ಬೆಂಬಲ ಸಹ ಸೂಚಿಸಿದ್ದರು. ಇದೀಗ ತಮ್ಮ ದ್ವೇಷದ ಹೇಳಿಕೆಗಳಿಂದಲೇ ಖ್ಯಾತರಾಗಿರುವ ಬಿಜೆಪಿ ಶಾಸಕ ರಾಜಾ ಸಿಂಗ್, ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಸಾಯಿ ಪಲ್ಲವಿಯನ್ನು ಬಂಧಿಸಬೇಕು ಎಂದಿದ್ದಾರೆ.

”ಆಕೆ ಮೊದಲು ಕಾಶ್ಮೀರಿ ಪಂಡಿತರ ನಿರಾಶ್ರಿತರ ಕ್ಯಾಂಪ್ಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿ ತಿಳಿದುಕೊಳ್ಳಬೇಕು. ಅವರೊಟ್ಟಿಗೆ ಮಾತನಾಡಿ, ಹೇಗೆ ಅವರು ಮಕ್ಕಳನ್ನು ಕೊಂದರು, ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದರು, ದನಗಳನ್ನು ಕಡಿದಂತೆ ಪಂಡಿತರನ್ನು ಕಡಿದರು ಎಂದು ತಿಳಿದುಕೊಳ್ಳಬೇಕು” ಎಂದಿದ್ದಾರೆ ರಾಜಾ ಸಿಂಗ್.
”ಸಾಯಿ ಪಲ್ಲವಿ ವಿರುದ್ಧ ದೂರು ನೀಡಬೇಕು, ಕೇವಲ ಒಂದು ಪೊಲೀಸ್ ಠಾಣೆಯಲ್ಲಿ ಅಲ್ಲ ರಾಜ್ಯದಾದ್ಯಂತ ಪೊಲೀಸ್ ಠಾಣೆಗಳಲ್ಲಿ ಸಾಯಿ ಪಲ್ಲವಿ ವಿರುದ್ಧ ದೂರು ದಾಖಲಾಗಬೇಕು. ಒಬ್ಬ ನಟ ಅಥವಾ ನಟಿಯ ಬಂಧನವಾದರೆ ಇತರ ಸೆಲೆಬ್ರಿಟಿಗಳಿಗೆ ಭಯ ಮೂಡುತ್ತದೆ. ಆಗ ಅವರು ನಮ್ಮ ಧರ್ಮವನ್ನನು ಹಿಯಾಳಿಸುವ ಕಾರ್ಯಕ್ಕೆ ಕೈ ಹಾಕುವುದಿಲ್ಲ” ಎಂದಿದ್ದಾರೆ.
”ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂ ವಿರುದ್ಧ ಮಾತನಾಡಲು ಈ ಸೆಲೆಬ್ರಿಟಿಗಳಿಗೆ ತಾಕತ್ ಇಲ್ಲ. ಆದರೆ ಹಿಂದು ಧರ್ಮದ ಅವಹೇಳನ ಮಾಡುತ್ತಾರೆ. ಈಗಿನ ಹಿಂದುಗಳು ಶಿವಾಜಿಯಂತಾಗಿದ್ದಾರೆ. ಅವರು ಸುಮ್ಮನೆ ಇರುವುದಿಲ್ಲ ಎಂದಿದ್ದಾರೆ.
