Cinema News
ರಾಮ್ ಚರಣ್‌ಗೆ ರಾಷ್ಟ್ರ ಪ್ರಶಸ್ತಿ ಸಿಗಬೇಕು ಎಂದ ಶಿವಣ್ಣ

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ “ಪೆದ್ದಿ” ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಮುಂಬೈನಲ್ಲಿ ಟ್ರೇಲರ್ ಲಾಂಚ್ ಬಳಿಕ ಚಿತ್ರತಂಡ ಬೆಂಗಳೂರಿಗೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿತು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ರಾಮ್ ಚರಣ್ ಜೊತೆಗೆ ನಟಿ ಜಾಹ್ನವಿ ಕಪೂರ್ ಹಾಗೂ ವಿಶೇಷ ಪಾತ್ರದಲ್ಲಿ ನಟಿಸಿರುವ ಶಿವರಾಜ್ ಕುಮಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಚರಣ್, “ಪೆದ್ದಿ” ಚಿತ್ರದಲ್ಲಿ ಶಿವಣ್ಣ ನನ್ನ ಗುರು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈ ಪಾತ್ರ ಮಾಡಿದ್ದು ನನಗೆ ತುಂಬಾ ಸಂತೋಷ ತಂದಿದೆ. ಅವರ ಹೊರತು ಬೇರೆ ಯಾರೂ ಈ ಪಾತ್ರಕ್ಕೆ ಅಷ್ಟು ಸೂಕ್ತರಾಗಿರಲಿಲ್ಲ ಎಂದು ಹೇಳಿದರು. ನಿರ್ದೇಶಕ ಬುಚ್ಚಿಬಾಬು, ಜಾಹ್ನವಿ ಕಪೂರ್, ಜಗಪತಿ ಬಾಬು ಹಾಗೂ ಬೊಮನ್ ಇರಾನಿ ಸೇರಿದಂತೆ ದೊಡ್ಡ ಕಲಾವಿದರ ಬಳಗ ಚಿತ್ರದ ಶಕ್ತಿ ಎಂದರು. ಜೂನ್ 4ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಪ್ರೀತಿಯಿಂದ ಸ್ವೀಕರಿಸಬೇಕು ಎಂದು ಮನವಿ ಮಾಡಿಕೊಂಡರು.

ನಂತರ ಮಾತನಾಡಿದ ಶಿವರಾಜ್ ಕುಮಾರ್, ಚಿರಂಜೀವಿ ಕುಟುಂಬದೊಂದಿಗೆ ನಮ್ಮ ಕುಟುಂಬಕ್ಕೆ ವಿಶೇಷ ಬಾಂಧವ್ಯ ಇದೆ ಎಂದು ಹೇಳಿದರು. “ಪೆದ್ದಿ” ಚಿತ್ರದ ಕಥೆ ಕೇಳಿದ ತಕ್ಷಣವೇ ನಾನು ಒಪ್ಪಿಕೊಂಡೆ. ರಾಮ್ ಚರಣ್ ಈ ಸಿನಿಮಾಗಾಗಿ ಹಾಕಿರುವ ಶ್ರಮ ನೋಡಿದರೆ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಗಲೇಬೇಕು ಅನ್ನಿಸುತ್ತದೆ. ಅವರು ನನಗೆ ತಮ್ಮನಂತವರು. ಪುನೀತ್ ನಂತರ ರಾಮ್ ಚರಣ್ ಕೂಡ ನನ್ನ ಸಹೋದರನೇ ಎಂದು ಭಾವನಾತ್ಮಕವಾಗಿ ಹೇಳಿದರು.

ಜಾಹ್ನವಿ ಕಪೂರ್ ಕನ್ನಡದಲ್ಲೇ ಮಾತನಾಡಿ, ಬೆಂಗಳೂರಿನ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ರಾಮ್ ಚರಣ್ ಜೊತೆ ಕೆಲಸ ಮಾಡಿರುವುದು ಅದ್ಭುತ ಅನುಭವ ಎಂದು ಹೇಳಿದ ಅವರು, ಅವರ ಡ್ಯಾನ್ಸ್ ಹಾಗೂ ಸಮರ್ಪಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಪೆದ್ದಿ” ಚಿತ್ರದಲ್ಲಿ ರಾಮ್ ಚರಣ್ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಿವಣ್ಣ ಗೌರನಾಯ್ಡು ಎಂಬ ಗುರು ಪಾತ್ರದಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವ ಈ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ
