Cinema News
ಟೀಸರ್-ಹಾಡುಗಳಿಂದ ಸದ್ದು ಮಾಡುತ್ತಿರುವ “ಗುರುತ್ವಾಕರ್ಷಣೆ” ಸೆನ್ಸಾರ್ ಅಂಗಳಕ್ಕೆ

ಮದರ್ ಪ್ರಾಮೀಸ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ “ಗುರುತ್ವಾಕರ್ಷಣೆ” ಚಿತ್ರ ಇದೀಗ ಸೆನ್ಸಾರ್ ಹಂತ ತಲುಪಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ. ಮಹೇಂದರ್ ಸಿ ಗುಂಡೇಗಾಲ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ದಿಲೀಪ್ ಸಿದ್ದಪ್ಪಾಜಿ ಕೊಳ್ಳೇಗಾಲ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
“ಗುರುತ್ವಾಕರ್ಷಣೆ” ಎಂಬ ಶೀರ್ಷಿಕೆ ಕೇಳುತ್ತಿದ್ದಂತೆಯೇ ಇದು ವೈಜ್ಞಾನಿಕ ಕಥಾಹಂದರ ಹೊಂದಿದ ಸಿನಿಮಾ ಎನ್ನುವ ಭಾವನೆ ಮೂಡಬಹುದು. ಆದರೆ ನಿರ್ದೇಶಕರು ಹೇಳುವಂತೆ ಇದು ಸೈನ್ಸ್ ಫಿಕ್ಷನ್ ಚಿತ್ರವಲ್ಲ. ಜೀವನದಲ್ಲಿ “ಗುರುತ್ವಾಕರ್ಷಣೆ” ಎಂಬ ಅರ್ಥವನ್ನು ಹೇಗೆ ಅನುಭವಿಸುತ್ತೇವೆ ಎಂಬುದನ್ನು ಕಥೆಯ ಮೂಲಕ ತೆರೆದಿಡುವ ಪ್ರಯತ್ನ ಚಿತ್ರದಲ್ಲಿದೆ. ಕೊಳ್ಳೇಗಾಲ ಮತ್ತು ಚಾಮರಾಜನಗರ ಸುತ್ತಮುತ್ತ ಕಥೆ ಸಾಗುತ್ತಿದ್ದು, ಚಿತ್ರೀಕರಣವೂ ಅಲ್ಲಿಯೇ ನಡೆದಿದೆ.

ಈಗಾಗಲೇ ನೀತು ನಿನಾದ್ ಸಂಗೀತ ನೀಡಿರುವ ಎರಡು ಹಾಡುಗಳು ಹಾಗೂ ಟೀಸರ್ A2 ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಸಾಕಷ್ಟು ವೀಕ್ಷಣೆ ಗಳಿಸಿರುವ ಈ ಪ್ರಚಾರ ಸಾಮಗ್ರಿಗಳು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿವೆ. ನಿರ್ದೇಶಕ ಮಹೇಂದರ್ ಸಿ ಗುಂಡೇಗಾಲ ಅವರ ಮಾತಿನಂತೆ, ತಮ್ಮ ತಾಯಿಯ ಆಸೆಯೇ ತಾನು ನಿರ್ದೇಶಕನಾಗಬೇಕು ಎಂಬುದು. ತಾಯಿಯ ಕೊನೆಯ ಆಸೆಯನ್ನು ಈಡೇರಿಸಲು ಹಗಲು ಕೆಲಸ ಮಾಡಿಕೊಂಡು ರಾತ್ರಿ ಸಮಯದಲ್ಲಿ ಸುಮಾರು ಒಂದೂವರೆ ವರ್ಷ ಕಥೆ ರೂಪಿಸಿದ್ದಾಗಿ ಅವರು ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಜಯಂತ್ ದೊರೆ ನಾಯಕನಾಗಿ ಅಭಿನಯಿಸಿದ್ದು, ಸುಕೃತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಕರ್, ದಿವ್ಯ ಕುಮಾರ್ ಸತ್ತೇಗಾಲ, ಮಂಡ್ಯ ಸಿದ್ದು, ವಿಜಯ್ ಕಿರಣ್, ಮಾಸ್ಟರ್ ಶೌರ್ಯ ಹಾಗೂ ಡಾ. ಭಾನುಪ್ರಕಾಶ್ ಎ.ಎಸ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪವಿತ್ರನ್ ಮತ್ತು ವಿಘ್ನೇಶ್ ವಿಕ್ಕಿ ಅವರ ಛಾಯಾಗ್ರಹಣ, ರಕ್ಷಿತ್ ರಾಜ್ ಅವರ ಸಂಕಲನ ಚಿತ್ರದ ಮತ್ತೊಂದು ವಿಶೇಷವಾಗಿದೆ.
