Cinema News
ಮಕ್ಕಳ ಮೊಬೈಲ್ ವ್ಯಸನದ ಕಥೆ ಹೇಳುವ “ಅಡಿಕ್ಷನ್”

ಎಸ್.ಬಿ.ವಿ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಬೃಂದಾ ಎನ್ ಜಯರಾಮ್ ನಿರ್ಮಿಸಿರುವ “ಅಡಿಕ್ಷನ್” ಸಿನಿಮಾ ಸೆನ್ಸಾರ್ ಮಂಡಳಿಯಿಂದ ಮಕ್ಕಳ ಚಿತ್ರ ಪ್ರಮಾಣಪತ್ರ ಪಡೆದಿದ್ದು, ಜೂನ್ ತಿಂಗಳಲ್ಲಿ ಬಿಡುಗಡೆಯಾಗಲು ಸಿದ್ಧತೆ ನಡೆಸಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಅಡಿಕ್ಷನ್ ಸಮಸ್ಯೆಯನ್ನು ಮುಖ್ಯ ವಿಷಯವನ್ನಾಗಿಟ್ಟುಕೊಂಡು ಈ ಚಿತ್ರವನ್ನು ರೂಪಿಸಲಾಗಿದೆ. ನೈಜ ಘಟನೆಗಳಿಂದ ಪ್ರೇರಿತವಾಗಿರುವ ಕಥೆಗೆ ಅಜಯ್ ಕುಮಾರ್ ಎ ಜೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಎರಡನೇ ನಿರ್ದೇಶನದ ಪ್ರಯತ್ನವಾಗಿದೆ.
ಚಿತ್ರದ ನಾಯಕನಾಗಿ ವಿಧು ಸುಂದರಕೃಷ್ಣ ಅರಸ್ ಅಭಿನಯಿಸಿದ್ದು, ಈ ಮೂಲಕ ಹಿರಿಯ ನಟ ಸುಂದರ ಕೃಷ್ಣ ಅರಸ್ ಅವರ ಕುಟುಂಬದ ಮೂರನೇ ತಲೆಮಾರಿನವರು ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ವಿಧುಗೆ ಇದು ಮೊದಲ ಸಿನಿಮಾ. ಜೊತೆಗೆ ವಿಶೇಷ ಪಾತ್ರಗಳಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ “ಲವ್ ಯು ಮುದ್ದು” ಖ್ಯಾತಿಯ ಸಿದ್ದು ಮೂಲಿಮನಿ ಕಾಣಿಸಿಕೊಂಡಿದ್ದಾರೆ. ರಿಷಿಕಾ, ಬೇಬಿ ಅಂಕಿತ ಗೌಡ, ಮಾಸ್ಟರ್ ಆರುಷ್ ಗುಣಕಿಮಠ, ಹರೀಶ್ ರೈ, ಸಿತಾರಾ, ತನುಶ್ರೀ, ಅನುಪಮಾ ಪಂಚಾಕ್ಷರಿ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿರುವ ಪದ್ಮಶ್ರೀ ಸಿ ಆರ್ ಚಂದ್ರಶೇಖರ್ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗುಂಡ್ಲುಪೇಟೆ ಸುರೇಶ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ದಿನೇಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಆರು ಹಾಡುಗಳನ್ನು ಒಳಗೊಂಡಿರುವ ಚಿತ್ರಕ್ಕೆ ರಾಯರ ಹರೀಶ್ ಹಾಗೂ ನೆಲಮನೆ ರಾಘವೇಂದ್ರ ಸಾಹಿತ್ಯ ಬರೆದಿದ್ದಾರೆ. ವ್ಯಾಸರಾಜ ಸೋಸಲೆ, ಮೊಹಮ್ಮದ್ ಸಾಬ್, ಸ್ನೇಹ, ಅನಿತಾ ಸಾರಾ ಮಹೇಶ್ ಹಾಗೂ ಆದರ್ಶ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ನಿರ್ಮಾಪಕಿ ಬೃಂದಾ ಎನ್ ಜಯರಾಮ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಕ್ಕಳಿಗೆ ಹಾಗೂ ಪೋಷಕರಿಗೆ ಅಗತ್ಯವಾದ ಸಂದೇಶವನ್ನು ಮನರಂಜನೆಯ ಮೂಲಕ ಹೇಳಲು ಹೊರಟಿರುವ “ಅಡಿಕ್ಷನ್” ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ.
