Cinema News
ರಾಮನವಮಿಯ ಸಂದರ್ಭದಲ್ಲಿ “ಬೃಂದಾವಿಹಾರಿ” ಚಿತ್ರದ “ಹೇ ರಾಮ ರಾಮ” ಹಾಡು ಅನಾವರಣಗೊಂಡಿದೆ.

ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಾಯಕನಾಗಿ ಅಭಿನಯಿಸಿರುವ “ಬೃಂದಾ ವಿಹಾರಿ” ಚಿತ್ರದ ಮೊದಲ ಹಾಡು ರಾಮನವಮಿಯ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಸಮೃದ್ಧಿ ವಿ. ಮಂಜುನಾಥ್ ನಿರ್ಮಾಣದಲ್ಲಿ, ಶ್ರೀನಿವಾಸರಾಜು ನಿರ್ದೇಶನದ ಈ ಚಿತ್ರಕ್ಕೆ ಡಾ|| ವಿ. ನಾಗೇಂದ್ರ ಪ್ರಸಾದ್ ಬರೆದಿರುವ “ಹೇ ರಾಮ ರಾಮ” ಎಂಬ ಮನಮುಟ್ಟುವ ಗೀತೆಯನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆ ಮಾಡಲಾಗಿದೆ. ಹೇಶಮ್ ಅಬ್ದುಲ್ ವಹಾಬ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡನ್ನು ಖ್ಯಾತ ಗಾಯಕ ಅನುರಾಗ್ ಕುಲಕರ್ಣಿ ಹಾಡಿದ್ದು, ಬಿಡುಗಡೆಯಾದ ಕ್ಷಣದಿಂದಲೇ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು ಹೆಚ್ಚಿನ ವೀಕ್ಷಣೆ ಪಡೆಯುತ್ತಿದೆ.

ಗಣೇಶ್ ಮತ್ತು ಶ್ರೀನಿವಾಸರಾಜು ಅವರ ಕಾಂಬಿನೇಷನ್ನಲ್ಲಿ ಮೂಡಿಬಂದ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಹಾಡುಗಳು ಹೇಗೆ ಜನಪ್ರಿಯವಾಗಿತ್ತೋ, ಅದೇ ರೀತಿ ಈ ಜೋಡಿಯ ಹೊಸ ಸಿನಿಮಾ “ಬೃಂದಾ ವಿಹಾರಿ” ಚಿತ್ರದ ಹಾಡುಗಳೂ ಪ್ರೇಕ್ಷಕರ ಮನಗೆಲ್ಲಲಿವೆ ಎಂಬ ವಿಶ್ವಾಸ ಮೂಡಿಸಿದೆ. ಈಗ ಬಿಡುಗಡೆಯಾದ ಮೊದಲ ಹಾಡೇ ಅದರ ಸಾಕ್ಷಿಯಾಗಿದೆ.
ವಿರಾಟ್ ಸಾಯಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಸಮೃದ್ಧಿ ವಿ. ಮಂಜುನಾಥ್ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ನಿರ್ದೇಶಕ ಶ್ರೀನಿವಾಸರಾಜು ಕಥೆ ಹಾಗೂ ಚಿತ್ರಕಥೆಯನ್ನೂ ರಚಿಸಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನಿರ್ದೇಶನ ಮತ್ತು ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ.

ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮ ನಟಿಸಿದ್ದು, ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.
