Cinema News
ಜನವರಿ 3 ರಂದು ಬಿಡುಗಡೆಯಾಗಲಿದೆ “ದಿಲ್ ಖುಷ್” ಚಿತ್ರದ ಮೊದಲ ಹಾಡು

ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ “ದಿಲ್ ಖುಷ್” ಚಿತ್ರದ ಮೊದಲ ಹಾಡು ಜನವರಿ 3 ರಂದು ಬಿಡುಗಡೆಯಾಗಲಿದೆ. ನಿರ್ದೇಶಕ ಪ್ರಮೋದ್ ಜಯ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕ ವಿಜಯ ಪ್ರಕಾಶ್ ಹಾಗೂ ಸ್ಪರ್ಷ ಹಾಡಿದ್ದಾರೆ. ಪ್ರಸಾದ್ ಕೆ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಮೊದಲ ಹಾಡಿನ ಕುರಿತಾದ ಪ್ರೋಮೊ ಬಿಡುಗಡೆಯಾಗಿದ್ದು ಹಾಡಿನ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿರುವ “ದಿಲ್ ಖುಷ್” ಚಿತ್ರವನ್ನು
ಪ್ರಮೋದ್ ಜಯ ನಿರ್ದೇಶಿಸಿದ್ದಾರೆ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಿಂಪಲ್ ಸುನಿ ಅವರ ಬಳಿ ಕಾರ್ಯ ನಿರ್ವಹಿಸಿರುವ ಪ್ರಮೋದ್ ಜಯ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಐದು ಸುಮಧುರ ಹಾಡುಗಳಿದ್ದು, ಪ್ರಸಾದ್ ಕೆ ಶೆಟ್ಟಿ ಅವರ ಸಂಗೀತ ನಿರ್ದೇಶನವಿದೆ. ನಿವಾಸ್ ನಾರಾಯಣ್ ಛಾಯಾಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನ ಹಾಗೂ ವಿಕ್ರಮ್, ಅಶೋಕ್ ಅವರ ಸಾಹಸ ನಿರ್ದೇಶನವಿದೆ.

ರಂಜಿತ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸ್ಪಂದನ ಸೋಮಣ್ಣ “ದಿಲ್ ಖುಷ್ ” ಚಿತ್ರದ ನಾಯಕಿ. ರಂಗಾಯಣ ರಘು, ಧರ್ಮಣ್ಣ ಕಡೂರು, ರವಿ ಭಟ್, ಅರುಣ ಬಾಲರಾಜ್, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂದನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

