Cinema News
ಮೊಬೈಲ್ ದುಷ್ಪರಿಣಾಮದ ಕಥೆ ಹೊತ್ತು ಬರುತ್ತಿದೆ ‘ಸರ್ವಾಂತರ್ಯಾಮಿ’! ಜುಲೈ 17ಕ್ಕೆ ಸಿನಿಮಾ ಬಿಡುಗಡೆ

ರಂಗಭೂಮಿ ಹಿನ್ನೆಲೆ ಹೊಂದಿರುವ ರಂಗಸ್ವಾಮಿ ಕಪನಿಪಾಳ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ಹಿತಾ ಆರ್ ಗೌಡ ನಿರ್ಮಾಣದ “ಸರ್ವಾಂತರ್ಯಾಮಿ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. “ಎಲ್ಲರ ಕೈಯಲ್ಲೂ ನಾನೇ ಸ್ವಾಮಿ” ಎಂಬ ಅಡಿಬರಹ ಹೊಂದಿರುವ ಈ ಸಿನಿಮಾ ಕುತೂಹಲ ಮೂಡಿಸಿದ್ದು, ಜುಲೈ 17ರಂದು ತೆರೆಗೆ ಬರಲು ಸಜ್ಜಾಗಿದೆ. ಚಿತ್ರಕ್ಕೆ ನಿರ್ದೇಶಕ ಹಾಗೂ ಗೀತರಚನೆಕಾರ ಕೆ. ರಾಮ್ ನಾರಾಯಣ್ ಬೆನ್ನೆಲುಬಾಗಿ ನಿಂತಿದ್ದಾರೆ.
ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಹಾಗೂ ನಟ ರಂಗಸ್ವಾಮಿ ಕಪನಿಪಾಳ್ಯ, “ಸರ್ವಾಂತರ್ಯಾಮಿ” ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ಎಂದು ಹೇಳಿದರು. ಮೊಬೈಲ್ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳನ್ನು ಕಥೆಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಸಿನಿಮಾಗಳಿಗೆ ಸೆನ್ಸಾರ್ ನಿಯಮಗಳಿದ್ದರೂ ಮೊಬೈಲ್ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಇದರಿಂದ ಮಕ್ಕಳು ಹಾಗೂ ದೊಡ್ಡವರ ಜೀವನದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.

ಕೆಲವು ಕಡೆಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಿ ಕೀ ಪ್ಯಾಡ್ ಮೊಬೈಲ್ ಬಳಸುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇನ್ನೂ ಕೆಲವು ಕಡೆ ಮೊಬೈಲ್ ಬಳಕೆಗೆ ಸಮಯದ ಮಿತಿ ನಿಗದಿಪಡಿಸಲಾಗಿದೆ. ಇದೇ ವಿಚಾರವನ್ನು ಚಿತ್ರದ ಪ್ರಮುಖ ಕಥಾವಸ್ತುವಾಗಿ ತೆಗೆದುಕೊಂಡಿದ್ದು, ಎಲ್ಲರ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದು ನಿರ್ದೇಶಕರು ತಿಳಿಸಿದರು.

ನಿರ್ಮಾಪಕಿ ಹಿತಾ ಆರ್ ಗೌಡ ಮಾತನಾಡಿ, ರಂಗಭೂಮಿ ಮೇಲಿನ ಆಸಕ್ತಿ ತಮ್ಮ ತಂದೆಯವರಿಂದ ಬಂದಿದ್ದು, ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದರು. ನಟ ಆಟೋ ನಾಗರಾಜ್ ಇದು ತಮ್ಮ ಅಭಿನಯದ 65ನೇ ಸಿನಿಮಾ ಹಾಗೂ ಪ್ರಮುಖ ಪಾತ್ರದಲ್ಲಿರುವ ನಾಲ್ಕನೇ ಚಿತ್ರ ಎಂದು ಹೇಳಿ, ಅಪ್ಪ-ಮಗಳ ಬಾಂಧವ್ಯದ ಭಾವನಾತ್ಮಕ ಕಥೆ ಇದಾಗಿದೆ ಎಂದು ತಿಳಿಸಿದರು. ಚಿತ್ರದಲ್ಲಿ ತೇಜಸ್ವಿನಿ, ಮೈರಾ, ಅಮೂಲ್ಯ ನಾರಾಯಣ್ ಸೇರಿದಂತೆ ಹಲವರು ನಟಿಸಿದ್ದು, ರಮೇಶ್ ಕೃಷ್ಣ ಸಂಗೀತ, ರಾಜು ಹೆಮ್ಮಿಗೆಪುರ ಛಾಯಾಗ್ರಹಣ ಹಾಗೂ ದೀಪು ಎಸ್ ಸಂಕಲನ ಚಿತ್ರಕ್ಕಿದೆ. ನಟರಾದ ಶ್ರೀಮುರಳಿ ಹಾಗೂ ನೀನಾಸಂ ಸತೀಶ್ ಕೂಡ ಟ್ರೇಲರ್ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
