Cinema News
ಸಂತೋಷ್ ಬಾಲರಾಜ್ ಕನಸಿನ ‘ಬೆಂಟ್ಲಿ’ ಟ್ರೇಲರ್ ಬಿಡುಗಡೆ; ಸ್ನೇಹಿತನ ನೆನೆದು ಕಂಬನಿ ಮಿಡಿದ ಯೋಗಿ

‘ಗಣಪ’ ಹಾಗೂ ‘ಕರಿಯ-2’ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟ ಸಂತೋಷ್ ಬಾಲರಾಜ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಅವರು ನಟಿಸಿ, ನಿರ್ದೇಶಿಸಿದ್ದ ‘ಬೆಂಟ್ಲಿ’ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಕಳೆದ ವರ್ಷದ ಆಗಸ್ಟ್ನಲ್ಲಿ ಅಕಾಲಿಕವಾಗಿ ನಿಧನರಾದ ಸಂತೋಷ್ ಅವರ ನೆನಪಿನಲ್ಲಿ ನಡೆದ ಈ ಕಾರ್ಯಕ್ರಮ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
‘ಸಿನಿ ಎಂಟರ್ಪ್ರೈಸಸ್’ ಬ್ಯಾನರ್ನಲ್ಲಿ ಶ್ವೇತಾ ಬಾಲರಾಜು ನಿರ್ಮಿಸಿರುವ ‘ಬೆಂಟ್ಲಿ’ ಚಿತ್ರದಲ್ಲಿ ಸಂತೋಷ್ ಬಾಲರಾಜ್ ಅವರೊಂದಿಗೆ ಸಿಮ್ರಾನ್ ನಾಟೇಕರ್, ಶ್ರುತಿ, ಚರಣ್ರಾಜ್, ರಾಜಾ ಬಲವಾಡಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸ್ನೇಹಿತ ಸಂತೋಷ್ ಅವರನ್ನು ನೆನೆದು ಮಾತನಾಡಿದ ‘ಲೂಸ್ ಮಾದ’ ಯೋಗಿ, ಈ ಸಿನಿಮಾ ಆದಷ್ಟು ಬೇಗ ತೆರೆಗೆ ಬರಬೇಕು ಹಾಗೂ ಎಲ್ಲರೂ ಚಿತ್ರಮಂದಿರಕ್ಕೆ ತೆರಳಿ ಚಿತ್ರವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಚಿತ್ರದ ಹಿನ್ನೆಲೆ ಧ್ವನಿ ನೀಡಿರುವ ಯೋಗಿ, ಸಂತೋಷ್ ಅವರಿಗೆ ಸಿನಿಮಾದ ಬಗ್ಗೆ ಅಪಾರ ಕನಸುಗಳಿದ್ದವು. ಅವರೊಂದಿಗೆ ಈ ಚಿತ್ರದ ಕುರಿತು ಹಲವು ಬಾರಿ ಚರ್ಚಿಸಿದ್ದಾಗಿ ನೆನಪಿಸಿಕೊಂಡರು. “ಸಂತೋಷ್ ಎಷ್ಟು ಒಳ್ಳೆಯ ಸಿನಿಮಾಗಳನ್ನು ಕೊಟ್ಟರು ಅನ್ನುವುದಕ್ಕಿಂತ, ಎಷ್ಟೊಂದು ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿದ್ದರು ಎಂಬುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ” ಎಂದು ಭಾವುಕರಾದರು. ಇದೇ ವೇಳೆ ನಟ ಪ್ರಮೋದ್ ಶೆಟ್ಟಿ ಕೂಡ ಸಂತೋಷ್ ಅವರ ಅಗಲಿಕೆಯನ್ನು ನೆನೆದು ಕಂಬನಿ ಮಿಡಿದರು.

ತಂದೆಯವರ ನಿಧನದ ಬಳಿಕವೂ ನಿರ್ಮಾಣ ಸಂಸ್ಥೆಯನ್ನು ಮುನ್ನಡೆಸಿ, ತಾವೇ ನಿರ್ದೇಶಿಸಿ ಹಾಗೂ ನಟಿಸಿದ್ದ ಸಿನಿಮಾದ ಸಂಭ್ರಮವನ್ನು ನೋಡಲು ಸಂತೋಷ್ ಇಲ್ಲದಿರುವುದು ನೋವಿನ ಸಂಗತಿ ಎಂದು ಪ್ರಮೋದ್ ಶೆಟ್ಟಿ ಹೇಳಿದರು. ಸಿನಿಮಾರಂಗವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಹಾಗೂ ದೊಡ್ಡ ಸಿನಿಮಾಗಳನ್ನು ನಿರ್ಮಿಸುವ ಹಲವು ಕನಸುಗಳನ್ನು ಸಂತೋಷ್ ಹೊಂದಿದ್ದರು ಎಂದು ಅವರು ಸ್ಮರಿಸಿದರು. ‘ಬೆಂಟ್ಲಿ’ಗೆ ಜೂಡಾ ಸ್ಯಾಂಡಿ ಸಂಗೀತ, ರವಿ ವರ್ಮ ಹಿನ್ನೆಲೆ ಸಂಗೀತ, ಕೆ.ಕೆ. ಮತ್ತು ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಹಾಗೂ ಉಮೇಶ್ ಸಂಕಲನ ನೀಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಝಂಕರ್ ಮ್ಯೂಸಿಕ್ ಪಡೆದುಕೊಂಡಿದೆ.
