Cinema News
ಹೆಣ್ಣಿನ ಸಂಕಷ್ಟಗಳಿಗೆ ಕನ್ನಡಿ ಹಿಡಿಯಲಿದೆ ‘ಮುಳ್ಳಿನ ಗುಲಾಬಿ’

ಆಶಾ ಗುರುಲಿಂಗಯ್ಯ ಅವರ ಜನಪ್ರಿಯ ‘ಮುಳ್ಳಿನ ಗುಲಾಬಿ’ ಕಾದಂಬರಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಸ್ಟೈಲ್ ಶಿವು ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ಗೌಡ, ಆಶಾ ಗುರುಲಿಂಗಯ್ಯ, ಗಿರಿಜಾ ಲೋಕೇಶ್ ಹಾಗೂ ರೇಖಾದಾಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರಥಮ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆದಿದ್ದು, ಚಿತ್ರತಂಡ ಸಿನಿಮಾ ಕುರಿತ ಹಲವು ಮಾಹಿತಿಗಳನ್ನು ಹಂಚಿಕೊಂಡಿತು. ಲೇಖಕಿ ಕಮ್ ನಾಯಕಿ ಆಶಾ ಗುರುಲಿಂಗಯ್ಯ ಮಾತನಾಡಿ, ಸ್ವದೇಶಿ ದಿಶಾ ಕಂಪನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪದವಿ ವ್ಯಾಸಂಗದ ದಿನಗಳಿಂದಲೇ ಕಾದಂಬರಿ ಬರೆಯುವ ಆಸಕ್ತಿ ಹೊಂದಿದ್ದಾಗಿ ತಿಳಿಸಿದರು. ಸಂಕಷ್ಟದಲ್ಲಿದ್ದ ಯುವತಿಯೊಬ್ಬಳ ಬದುಕನ್ನು ಕಂಡು ಈ ಕಥೆ ಬರೆಯುವ ಪ್ರೇರಣೆ ದೊರೆಯಿತು. ಆಕೆ ವಿದ್ಯಾಭ್ಯಾಸಕ್ಕಾಗಿ ಎದುರಿಸುವ ಕಷ್ಟಗಳು, ಮದುವೆಯ ನಂತರ ಗಂಡನ ಮನೆಯಲ್ಲಿ ಅನುಭವಿಸುವ ನೋವು-ತೊಂದರೆಗಳನ್ನು ಕಾದಂಬರಿಯಲ್ಲಿ ದಾಖಲಿಸಿದ್ದಾಗಿ ಹೇಳಿದರು. ಬಿ.ಟಿ. ಲಲಿತಾನಾಯಕ್ ಮುನ್ನುಡಿ ಹಾಗೂ ಮೈಸೂರು ರಮಾನಂದ್ ಹಿನ್ನುಡಿ ಬರೆದಿದ್ದ ಕಾದಂಬರಿ ಪ್ರಕಟವಾದ ಬಳಿಕ ಸಾವಿರ ಪ್ರತಿಗಳು ಮಾರಾಟವಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಕಥೆ ಸಿನಿಮಾ ರೂಪದಲ್ಲಿ ಇನ್ನಷ್ಟು ಜನರನ್ನು ತಲುಪಲಿದೆ ಎಂಬ ಉದ್ದೇಶದಿಂದ ಚಿತ್ರ ಮಾಡಲು ನಿರ್ಧರಿಸಿದ್ದಾಗಿ ಆಶಾ ಹೇಳಿದರು.
ನಿರ್ದೇಶಕ ಸ್ಮೈಲ್ ಶಿವು ಮಾತನಾಡಿ, ‘ನಿಸರ್ಗ’ ನಂತರ ಇದು ತಮ್ಮ ಎರಡನೇ ನಿರ್ದೇಶನದ ಚಿತ್ರ ಎಂದು ತಿಳಿಸಿದರು. ಸ್ನೇಹಿತರೇ ಒಟ್ಟಾಗಿ ಸೇರಿ ಸಿನಿಮಾ ನಿರ್ಮಿಸುತ್ತಿದ್ದು, ಗಂಡನ ಮನೆಗೆ ಹೋದ ಬಳಿಕ ಮಹಿಳೆಯೊಬ್ಬಳು ಎದುರಿಸುವ ಸಂಕಷ್ಟಗಳು ಮತ್ತು ಅದರಿಂದ ಆಕೆ ಹೇಗೆ ಹೊರಬರುತ್ತಾಳೆ ಎಂಬುದೇ ಚಿತ್ರದ ಪ್ರಮುಖ ಕಥಾವಸ್ತು ಎಂದರು. ಈ ಹಿಂದೆ ಬಂದಿರುವ ಇದೇ ಹೆಸರಿನ ಚಿತ್ರಕ್ಕೂ ತಮ್ಮ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಕಾಲ ಬದಲಾದರೂ ಮಹಿಳೆಯರು ಎದುರಿಸುವ ಕೆಲವು ಸಮಸ್ಯೆಗಳು ಇಂದಿಗೂ ಮುಂದುವರಿದಿವೆ. ಮೂಲ ಕಾದಂಬರಿಯ ಸುಮಾರು 80% ಕಥಾವಸ್ತುವನ್ನು ಉಳಿಸಿಕೊಂಡು ಚಿತ್ರಕಥೆ ರೂಪಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಸುಮಾರು 25 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಜನೆಯಿದ್ದು, ನಾಯಕನ ಪಾತ್ರಕ್ಕೆ ಇನ್ನೂ ಅಂತಿಮ ಆಯ್ಕೆ ನಡೆದಿಲ್ಲ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಪಲ್ಲಕ್ಕಿ ಮ್ಯೂಸಿಕ್ ಸಂಗೀತ ನೀಡಲಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಿರ್ಮಾಪಕ ಅಜಯ್ ಗೌಡ, ಹಲವು ವರ್ಷಗಳಿಂದ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಟನಾಗಿ ಕ್ಯಾಮೆರಾ ಮುಂದೆ ಬರುತ್ತಿದ್ದು, ಚಿತ್ರದಲ್ಲಿ ತಮ್ಮದು ಲವರ್ ಬಾಯ್ ಪಾತ್ರ ಎಂದು ಹೇಳಿದರು. ಚಿತ್ರಕಥೆ ಬರೆದಿರುವ ಎಂ.ಡಿ. ಕೌಶಿಕ್, ಇತ್ತೀಚಿನ ದಿನಗಳಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ನಿರ್ಮಾಣ ಕಡಿಮೆಯಾಗುತ್ತಿದೆ. ಆದರೆ ‘ಮುಳ್ಳಿನ ಗುಲಾಬಿ’ ಕಥೆ ಇಂದಿನ ಸಮಾಜದ ವಾಸ್ತವ ಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದೆ ಎಂದು ಅಭಿಪ್ರಾಯಪಟ್ಟರು. ಹಿರಿಯ ನಟಿ ರೇಖಾದಾಸ್, ಅಪೂರ್ವ, ಮೈಸೂರು ರಮಾನಂದ್ ಹಾಗೂ ಛಾಯಾಗ್ರಾಹಕ ಪಿ.ವಿ.ಆರ್. ಸ್ವಾಮಿ ಕೂಡ ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಾರ್ಯಕ್ರಮಕ್ಕೆ ಜೆಡಿಎಸ್ನ ವಿಜಯೇಂದ್ರ ಹಾಗೂ ಲಯನ್ಸ್ನ ಸತ್ಯವತಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ಶಿವಾನಂದ್ ಅವರ ಸಂಭಾಷಣೆ ಹಾಗೂ ಸಂಜೀವ್ ರೆಡ್ಡಿ ಅವರ ಸಂಕಲನವಿದೆ. ಮಹಿಳೆಯರ ಬದುಕಿನಲ್ಲಿರುವ ನೋವು, ಹೋರಾಟ, ಕೌಟುಂಬಿಕ ಸಂಕಷ್ಟ ಮತ್ತು ಅದರಿಂದ ಹೊರಬರುವ ಹಾದಿಯನ್ನು ಕೇಂದ್ರವಾಗಿಟ್ಟುಕೊಂಡಿರುವ ‘ಮುಳ್ಳಿನ ಗುಲಾಬಿ’ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ನಿರೀಕ್ಷೆಯಿದೆ.
