Cinema News
13 ತಂಡದಿಂದ 500 ಆಟೋಗಳಿಗೆ ಉಚಿತ ಗ್ಯಾಸ್- ಫುಡ್ ಕಿಟ್

ಸಿನಿಮಾ ಪ್ರಚಾರದೊಂದಿಗೆ ಸಮಾಜ ಸೇವೆಯನ್ನೂ ಮಾಡಿಕೊಂಡು ಬರುವ ಮೂಲಕ “13” ಚಿತ್ರತಂಡ ವಿಭಿನ್ನತೆ ಮೆರೆದಿದೆ. ಆ.15ರ ಸ್ವಾತಂತ್ರೋತ್ಸವದಂದೇ ರಾಘವೇಂದ್ರ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಆ ಪ್ರಯುಕ್ತ 500 ಆಟೋ ಚಾಲಕರಿಗೆ ಸಹಾಯಹಸ್ತ ಚಾಚಿದೆ. ಜಯನಗರ 4ನೇ ಬ್ಲಾಕ್ ಬಳಿಯ ವಿಘ್ನವಿನಾಯಕ ಆಟೋ ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರೋತ್ಸವ ಹಾಗೂ ರಾಗಣ್ಣ ಅವರ ಹುಟ್ಟುಹಬ್ಬವನ್ನು ನಟ ಪ್ರಮೋದ್ ಶೆಟ್ಟಿ ಹಾಗೂ ಸಮಾಜಸೇವಕ ಅನಿಲ್ ಕುಮಾರ್ ಅವರ ನೇತೃತ್ವದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಅವರಿಂದ ಐದುನೂರು ಆಟೋ ಚಾಲಕರಿಗೆ ಫುಡ್ ಕಿಟ್ ವಿತರಿಸಲಾಯಿತು. ಅಲ್ಲದೆ ಆ 500 ಆಟೋಗಳಿಗೂ ಒಂದು ರೂ.ಗೆ ಲೀಟರ್ ನಂತೆ ಆಟೋಗ್ಯಾಸ್ ತುಂಬಿಸಿಕೊಡಲಾಯಿತು. ಈ ಮೂಲಕ ‘ಫ್ರೀ ಬಸ್’ನಿಂದ ಸಂಕಷ್ಟದಲ್ಲಿರುವ ಚಾಲಕರಿಗೆ 13 ಚಿತ್ರದ ಪ್ರೆಸೆಂಟರ್ ಅನಿಲ್ ಕುಮಾರ್ ಅವರು ನೆರವಾದರು. ಇದೇ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸೆಪ್ಟೆಂಬರ್ 15ರಂದು 13 ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಟ ಪ್ರಮೋದ್ ಕುಮಾರ್ ಘೋಷಿಸಿದರು.

ಪಲ್ಲಕ್ಕಿ ಕೆ.ನರೇಂದ್ರಬಾಬು ಅವರ ನಿರ್ದೇಶನದ, ರಾಘವೇಂದ್ರ ರಾಜ್‌ಕುಮಾರ್, ಶ್ರುತಿ, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ ಭಾವೈಕ್ಯತೆಯ ಸಂದೇಶ ಸಾರುವ, ಥ್ರಿಲ್ಲರ್ ಕಥಾನಕ ಹೊಂದಿದ ಚಿತ್ರ 13. ಯುವಿ ಪ್ರೊಡಕ್ಷನ್ ಅಡಿಯಲ್ಲಿ ಕೆ. ಸಂಪತ್ ಕುಮಾರ್, ಹೆಚ್.ಎಸ್. ಮಂಜುನಾಥ್, ಮಂಜುನಾಥ ಗೌಡ ಹಾಗೂ ಸಿ.ಕೇಶವಮೂರ್ತಿ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಇತ್ತೀಚೆಗಷ್ಟೇ ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರ ದೊರೆತಿದೆ.

ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವರೀತಿ ಕಷ್ಟಪಡುತ್ತಾರೆ ಎಂಬುದನ್ನು ಥ್ರಿಲ್ಲರ್ ಕಥೆಯ ಮೂಲಕ ಹೇಳುವ ಚಿತ್ರ ಇದಾಗಿದೆ. ರಾಘವೇಂದ್ರ ರಾಜ್‌ಕುಮಾರ್ ನಿವೃತ್ತ ಸೈನಿಕ ಹಾಗೂ ಗುಜರಿ ಅಂಗಡಿ ಮಾಲೀಕ ಮೋಹನ್ ಕುಮಾರ್ ಪಾತ್ರದಲ್ಲಿ ಮತ್ತು ಟೀ ಅಂಗಡಿ ನಡೆಸುವ ಸಾಯಿರಾಬಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರದಲ್ಲಿ ಶ್ರುತಿ ಅವರು ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಭಾಗದಲ್ಲಿ ನಡದೆ ಒಂದು ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕರು ಈ ಚಿತ್ರಕಥೆಯನ್ನು ಹೆಣೆದಿದ್ದಾರೆ. ಮಂಜುನಾಥ್ ನಾಯ್ಡು ಅವರ ಛಾಯಾಗ್ರಹಣ ಹಾಗೂ ಸೋಹನ್ ಬಾಬು ಅವರ ಸಂಗೀತ ಈ ಚಿತ್ರಕ್ಕಿದೆ.
