Cinema News
ಸೆಪ್ಟೆಂಬರ್ 18ಕ್ಕೆ ‘ಅಮರ್ಥ’ ಸಿನಿಮಾ; ಪ್ರೇಕ್ಷಕರ ಸಹಕಾರ ಕೋರಿದ ಚಿತ್ರತಂಡ!

ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ನಿರ್ಮಿಸಿರುವ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ನಿರ್ದೇಶನದ ‘ಅಮರ್ಥ’ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ನಾಯಕ–ನಾಯಕಿಯಾಗಿ ನಟಿಸಿರುವ ಈ ಚಿತ್ರ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಖ್ಯಾತ ಉದ್ಯಮಿ ಪ್ರಕಾಶ್ ಶೆಟ್ಟಿ ಹಾಗೂ ನಟ ಡಾರ್ಲಿಂಗ್ ಕೃಷ್ಣ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ನಟ ಶಿವಧ್ವಜ್ ಸೇರಿದಂತೆ ನಿರ್ಮಾಪಕ ಡಾ. ಕನ್ಯಾನ ಸದಾಶಿವ ಶೆಟ್ಟಿ, ನಿರ್ದೇಶಕರಾದ ಗುರು ಹೆಗ್ಡೆ–ವಿನಯ್ ಪ್ರೀತಮ್, ಕಲಾವಿದರಾದ ಉಷಾ ಭಂಡಾರಿ, ಅಶ್ವ, ಅನುರಾಧ ಭಟ್, ಸಂಗೀತ ನಿರ್ದೇಶಕ ಪಂಚಮ್ ಜೀವ, ಹಿನ್ನೆಲೆ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಹಾಗೂ ವಿತರಕ ರಮೇಶ್ ಬಾಬು ಉಪಸ್ಥಿತರಿದ್ದರು.
‘ಅಮರ್ಥ’ ಕುಟುಂಬ ಸಮೇತ ಕುಳಿತು ವೀಕ್ಷಿಸಬಹುದಾದ ಉತ್ತಮ ಕೌಟುಂಬಿಕ ಚಿತ್ರವಾಗಿದ್ದು, ಸೆಪ್ಟೆಂಬರ್ 18ರಂದು ಪ್ರೇಕ್ಷಕರ ಮುಂದೆ ಬರಲಿದೆ ಎಂದು ನಿರ್ಮಾಪಕ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು. ಚಿತ್ರವನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸುವ ಮೂಲಕ ಪ್ರೋತ್ಸಾಹ ನೀಡುವಂತೆ ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿದರು. ನಿರ್ಮಾಪಕ ಹಾಗೂ ನಿರ್ದೇಶಕ ಗುರು ಹೆಗ್ಡೆ ಮಾತನಾಡಿ, ಕಳೆದ 25 ವರ್ಷಗಳಿಂದ ಚಿತ್ರರಂಗದೊಂದಿಗೆ ತಮ್ಮ ಒಡನಾಟವಿದ್ದು, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಇದು ತಮ್ಮ ಮೊದಲ ಪ್ರಯತ್ನ ಎಂದು ಹೇಳಿದರು. ಕನ್ಯಾನ ಸದಾಶಿವ ಶೆಟ್ಟಿ ಅವರ ಸಹಕಾರದಿಂದ ಸಿನಿಮಾ ಉತ್ತಮವಾಗಿ ಮೂಡಿಬಂದಿದ್ದು, ಪ್ರೇಕ್ಷಕರು ಚಿತ್ರವನ್ನು ವೀಕ್ಷಿಸಿ ತಮ್ಮ ಆಪ್ತರಿಗೂ ತಿಳಿಸುವ ಮೂಲಕ ‘ಅಮರ್ಥ’ ಚಿತ್ರವನ್ನು ಸಮರ್ಥವಾಗಿಸಬೇಕು ಎಂದು ಮನವಿ ಮಾಡಿದರು.

ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಸೇರಿ ಕುಟುಂಬದ ಎಲ್ಲರೂ ನೋಡಬಹುದಾದ ಮನರಂಜನಾತ್ಮಕ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಎಂದರು. ‘ಅಮರ್ಥ’ ನೋಡಿದಾಗ ಪ್ರೇಕ್ಷಕರಿಗೆ ತಮ್ಮ ಎಸ್ಎಸ್ಎಲ್ಸಿ ದಿನಗಳ ನೆನಪುಗಳು ಮರುಕಳಿಸಬಹುದು ಎಂದು ಹೇಳಿದ ಅವರು, ಮೇಘನಾ ರಾಜ್ ಅವರೊಂದಿಗೆ ಇದು ಮೂರನೇ ಸಿನಿಮಾ ಎಂದು ತಿಳಿಸಿದರು. ಚಿತ್ರದಲ್ಲಿ 28ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದು, ಸೆಪ್ಟೆಂಬರ್ 18ರ ಬಿಡುಗಡೆಗೂ ಮುನ್ನ ಶಿವಮೊಗ್ಗ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವು ನಗರಗಳಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಪ್ರಚಾರ ಮಾಡುವುದಾಗಿ ಹೇಳಿದರು.

ಚಿತ್ರದ ಮೊದಲ ಕಲಾವಿದೆಯಾಗಿ ಆಯ್ಕೆಯಾಗಿದ್ದನ್ನು ನೆನಪಿಸಿಕೊಂಡ ಮೇಘನಾ ರಾಜ್, ‘ಅಮರ್ಥ’ ಈ ಹಂತಕ್ಕೆ ಬರಲು ನಿರ್ದೇಶಕ ಗುರು ಹೆಗ್ಡೆ ಅವರ ಪರಿಶ್ರಮ ಪ್ರಮುಖ ಕಾರಣ ಎಂದರು. ‘ಬಹುಪರಾಕ್’ ಹಾಗೂ ‘ಬುದ್ದಿವಂತ 2’ ನಂತರ ಶ್ರೀನಗರ ಕಿಟ್ಟಿ ಅವರೊಂದಿಗೆ ಇದು ತಮ್ಮ ಮೂರನೇ ಚಿತ್ರವಾಗಿದ್ದು, ರಂಗಭೂಮಿ ಹಿನ್ನೆಲೆಯ ಅನೇಕ ಪ್ರತಿಭಾವಂತ ಕಲಾವಿದರೊಂದಿಗೆ ಕೆಲಸ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು. ಮತ್ತೊಬ್ಬ ನಿರ್ದೇಶಕ ವಿನಯ್ ಪ್ರೀತಮ್ ಅವರು ಸಿನಿಮಾ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸಿದರು. ಸೆಪ್ಟೆಂಬರ್ 18ರಂದು ‘ಅಮರ್ಥ’ ಚಿತ್ರಮಂದಿರಕ್ಕೆ ಬರಲಿದ್ದು, ಪ್ರೇಕ್ಷಕರ ಬೆಂಬಲವನ್ನು ಚಿತ್ರತಂಡ ಎದುರು ನೋಡುತ್ತಿದೆ.
