Cinema News
ಗಣೇಶ್ ಆಗಮನಕ್ಕೆ ಕಿಕ್ಕಿರಿದ AMB: ಅಭಿಮಾನಿಗಳ ಸಂಭ್ರಮದ ನಡುವೆ ‘ಟಾಸ್’ ಟ್ರೈಲರ್ ಲಾಂಚ್

ಕಪಾಲಿ ಥಿಯೇಟರ್ನಿಂದ ನವೀಕರಣಗೊಂಡಿರುವ AMB ಮಲ್ಟಿಫ್ಲೆಕ್ಸ್ವರೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ವಿಶೇಷವಾದ ಭಾವನಾತ್ಮಕ ನಂಟಿದೆ ಎನ್ನಬಹುದು. ಎಸ್. ನಾರಾಯಣ್ ನಿರ್ದೇಶನದಲ್ಲಿ ಗಣೇಶ್ ಹಾಗೂ ಅಮೂಲ್ಯ ಅಭಿನಯಿಸಿದ್ದ ‘ಚೆಲುವಿನ ಚಿತ್ತಾರ’ ಇದೇ ಕಪಾಲಿ ಚಿತ್ರಮಂದಿರದಲ್ಲಿ ಸತತ 27 ವಾರಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿತ್ತು. ಆ ಸಿನಿಮಾ ಹಾಗೂ ಥಿಯೇಟರ್ನ ನೆನಪುಗಳು ಗಣೇಶ್ ಅವರ ಸಿನಿ ಪಯಣದಲ್ಲಿ ವಿಶೇಷ ಸ್ಥಾನ ಪಡೆದಿವೆ. ಇದೀಗ ಇದೇ ಸ್ಥಳದಲ್ಲಿ ನಡೆದ ‘ಟಾಸ್’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಗಣೇಶ್ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಗೋಲ್ಡನ್ ಮೂವೀಸ್ ಪ್ರೆಸೆಂಟ್ಸ್ ಮೂಲಕ ಅರ್ಜುನ್ ದೇವ್ ನಟಿಸಿ, ನಿರ್ದೇಶಿಸಿರುವ ‘ಟಾಸ್’ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆಯೇ AMB ಸುತ್ತಮುತ್ತ ಅಭಿಮಾನಿಗಳ ದಂಡೇ ಸೇರಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಚಿತ್ರಮಂದಿರದೊಳಗೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಚಿತ್ರದ ನಾಯಕ ಹಾಗೂ ನಿರ್ದೇಶಕ ಅರ್ಜುನ್ ದೇವ್ ಅವರೊಂದಿಗೆ ಗಣೇಶ್ ಬಾಲ್ಕನಿಯಿಂದ ಕೆಳಗಿಳಿದು ಬಂದ ಕ್ಷಣ ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿತು. ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಅಭಿಮಾನಿಗಳು ಗಣೇಶ್ ಅವರೊಂದಿಗೆ ಹಸ್ತಲಾಘವ ಮಾಡಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಬಳಿಕ ಚಿತ್ರದ ಹಾಡುಗಳು ಹಾಗೂ ಪ್ರಮುಖ ಕಂಟೆಂಟ್ ಪ್ರದರ್ಶನಗೊಂಡಿದ್ದು, ಗಣೇಶ್, ಅರ್ಜುನ್ ದೇವ್, ನಾಯಕಿ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಹಾಗೂ ನಿರ್ಮಾಪಕರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರೂಪಕಿ ಅನುಶ್ರೀ ಜೊತೆ ಗಣೇಶ್ ನಡೆಸಿದ ಮಾತುಕತೆಯ ಬಳಿಕ ಟ್ರೈಲರ್ ಅನಾವರಣಗೊಂಡಿತು.

‘ಟಾಸ್’ ಟ್ರೈಲರ್ ಗಮನಿಸಿದಾಗ ಪ್ರೀತಿ–ಪ್ರೇಮದ ಜೊತೆಗೆ ರಾಜಕೀಯ, ರೌಡಿಗಳ ಮಾಫಿಯಾ, ತಾಯಿ–ಮಗನ ಭಾವನಾತ್ಮಕ ಸಂಬಂಧ ಹಾಗೂ ತಂದೆಯ ಬಾಂಧವ್ಯದಂತಹ ಹಲವು ಅಂಶಗಳು ಕಥೆಯಲ್ಲಿರುವುದು ಗೋಚರಿಸುತ್ತದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್, ‘ಟಾಸ್’ ಚಿತ್ರವನ್ನು ಗೋಲ್ಡನ್ ಮೂವೀಸ್ ಮೂಲಕ ಪ್ರೆಸೆಂಟ್ ಮಾಡಲು ಕಾರಣವೇನು ಎಂಬುದನ್ನು ವಿವರಿಸಿದರು. ತಾವು ಸಿನಿಮಾ ಪ್ರೇಮಿ ಹಾಗೂ ಸಿನಿಮಾ ಉತ್ಸಾಹಿಯಾಗಿರುವುದರಿಂದ ಉತ್ತಮ ಪ್ರಯತ್ನಗಳಿಗೆ ಬೆಂಬಲ ನೀಡಲು ಸದಾ ಆಸಕ್ತಿ ಹೊಂದಿರುವುದಾಗಿ ಹೇಳಿದರು. ಹೊಸ ತಂಡಗಳು ಅಥವಾ ಉತ್ತಮ ಸಿನಿಮಾ ಮಾಡಿರುವವರು ಸಹಯೋಗಕ್ಕಾಗಿ ಬಂದಾಗ ಪ್ರೀತಿಯಿಂದ ಕೈಜೋಡಿಸುವುದರಿಂದ ಬಾಂಧವ್ಯ ಬೆಳೆದು, ಅದರಿಂದ ಚಿತ್ರರಂಗಕ್ಕೂ ಹೊಸ ಎನರ್ಜಿ ಸಿಗುತ್ತದೆ ಎಂದು ಗಣೇಶ್ ಅಭಿಪ್ರಾಯಪಟ್ಟರು. ಮಂಗಳೂರಿನ ಹೆಮ್ಮೆಯ ಕೋಸ್ಟಲ್ವುಡ್ ಪ್ರತಿಭೆ ಅರ್ಜುನ್ ದೇವ್ ಒಬ್ಬ ಉತ್ತಮ ನಟ ಹಾಗೂ ನಿರ್ದೇಶಕ ಎಂದ ಅವರು, ಅವರ ತಂದೆ ಡಾ. ದೇವದಾಸ್ ಕಾಫಿಕಾಡ್ ಕೂಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡ ಪ್ರತಿಭಾವಂತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಉತ್ತಮ ಕಥೆ ಸಿಕ್ಕರೆ ಅರ್ಜುನ್ ದೇವ್ ಅವರೊಂದಿಗೆ ಕೆಲಸ ಮಾಡುವ ಆಸೆಯನ್ನೂ ಗಣೇಶ್ ವ್ಯಕ್ತಪಡಿಸಿದರು.

ತಮ್ಮ ಸಿನಿಮಾಗೆ ಗೋಲ್ಡನ್ ಮೂವೀಸ್ ಬೆಂಬಲ ನೀಡಿರುವುದು ಆನೆಬಲ ಸಿಕ್ಕಂತಾಗಿದೆ ಎಂದು ಅರ್ಜುನ್ ದೇವ್ ಸಂತಸ ವ್ಯಕ್ತಪಡಿಸಿದರು. ತಮ್ಮ ಹಾಗೂ ತಂದೆಯ ಮೇಲಿನ ಪ್ರೀತಿ ಮತ್ತು ಗೌರವದಿಂದ ಶಿಲ್ಪಾ ಗಣೇಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬೆಂಬಲವಾಗಿ ನಿಂತಿರುವುದು ಇಡೀ ಚಿತ್ರತಂಡಕ್ಕೆ ಮತ್ತಷ್ಟು ಆತ್ಮವಿಶ್ವಾಸ ನೀಡಿದೆ ಎಂದರು. ಸೆಪ್ಟೆಂಬರ್ 18ರಂದು ತೆರೆಗೆ ಬರಲಿರುವ ‘ಟಾಸ್’ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಭಾವನಾತ್ಮಕ ಲೋಕಕ್ಕೆ ಕರೆದೊಯ್ಯಲಿದೆ ಎಂಬ ಭರವಸೆಯನ್ನು ನೀಡಿದರು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಕೂಡ ಚಿತ್ರದ ಹಾಡುಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ, ಅರ್ಜುನ್ ದೇವ್ ಅವರ ಕೆಲಸವನ್ನು ಶ್ಲಾಘಿಸಿದರು. ಉತ್ತಮ ಹಾಡುಗಳು ಮತ್ತು ಉತ್ತಮ ಚಿತ್ರ ಸಿಕ್ಕಾಗ ಸಂಗೀತ ನಿರ್ದೇಶಕರಿಗೂ ಅದ್ಭುತವಾದ ಸಂಗೀತ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕರ್ನಾಟಕದಲ್ಲಿ ‘ಟಾಸ್’ ಚಿತ್ರವು 30 ಸಿಂಗಲ್ ಸ್ಕ್ರೀನ್ ಹಾಗೂ 40 ಮಲ್ಟಿಫ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಲಿದ್ದು, ಹೆಚ್ಚುವರಿಯಾಗಿ 10 ಚಿತ್ರಮಂದಿರಗಳಲ್ಲಿ ತುಳು ಭಾಷೆಯಲ್ಲೂ ತೆರೆಕಾಣಲಿದೆ ಎಂದು ವಿತರಕರು ಮಾಹಿತಿ ನೀಡಿದ್ದಾರೆ.
