Cinema News
‘666 ಆಪರೇಷನ್ ಡ್ರೀಮ್ ಥಿಯೇಟರ್’ ಟೀಸರ್ ರಿಲೀಸ್; ಶಿವಣ್ಣ-ಡಾಲಿ ಕಾಂಬಿನೇಷನ್‌ಗೆ ಭರ್ಜರಿ ಪ್ರತಿಕ್ರಿಯೆ

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದ ಟೀಸರ್ ಬೆಂಗಳೂರಿನ ಒರೈಯನ್ ಮಾಲ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯಿತು. ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟೀಸರ್ ಈಗಾಗಲೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದು, ಕಾರ್ಯಕ್ರಮದಲ್ಲಿ ಚಿತ್ರತಂಡದ ಎಲ್ಲ ಸದಸ್ಯರೂ ಭಾಗವಹಿಸಿದ್ದರು.

ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಶಿವರಾಜ್‌ಕುಮಾರ್, ನಿರ್ದೇಶಕ ಹೇಮಂತ್ ಎಂ. ರಾವ್ ಅವರ ಕೆಲಸದ ಶೈಲಿಯನ್ನು ಮೆಚ್ಚಿ, ನಿರ್ಮಾಪಕ ವೈಶಾಖ್ ಯಶಸ್ವಿ ನಿರ್ಮಾಪಕರಾಗುವ ವಿಶ್ವಾಸ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ತಾವು ಏಜೆಂಟ್ ಪ್ರಕಾಶ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಸಾಮಾನ್ಯ ಬಾಂಡ್ ಪಾತ್ರವಲ್ಲ, ಎಲ್ಲರನ್ನೂ ಒಂದೇ ಬಾಂಡಿಂಗ್‌ನಲ್ಲಿ ಕಟ್ಟುವ ವಿಭಿನ್ನ ಪಾತ್ರ ಎಂದು ತಿಳಿಸಿದರು. ಚಿತ್ರದಲ್ಲಿ ಕೆಲಸ ಮಾಡಿದ ಅನುಭವ ವಿಶೇಷವಾಗಿದ್ದು, ಪಾತ್ರದ ಸ್ವಾಗ್ ಹಾಗೂ ಅಟಿಟ್ಯೂಡ್ ತಮ್ಮನ್ನು ಹೊಸ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರುತ್ತದೆ ಎಂದರು.

ಡಾಲಿ ಧನಂಜಯ್ ಮಾತನಾಡಿ, ವೈಶಾಖ್ ಅವರ ನಿರ್ಮಾಪಕನ ಕನಸು ನನಸಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು. ನಿರ್ದೇಶಕ ಹೇಮಂತ್ ಅವರೊಂದಿಗೆ ಕೆಲಸ ಮಾಡುವುದು ಹೊಸ ಅನುಭವವಾಗಿದ್ದು, ಅವರ ಸಮರ್ಪಣೆ ಹಾಗೂ ಶ್ರಮದಿಂದ ಉತ್ತಮ ಸಿನಿಮಾ ಮೂಡಿಬಂದಿದೆ ಎಂದರು. ಶಿವಣ್ಣ ತಮ್ಮಂತಹ ಕಲಾವಿದರಿಗೆ ದೊಡ್ಡ ಶಕ್ತಿ ಎಂದು ಹೇಳಿದ ಅವರು, ಟೀಸರ್ ಕೇವಲ ಆರಂಭ ಮಾತ್ರ; ಸಿನಿಮಾದಲ್ಲಿ ಇನ್ನೂ ಅನೇಕ ಅಚ್ಚರಿಗಳು ಪ್ರೇಕ್ಷಕರನ್ನು ಎದುರು ನೋಡುತ್ತಿವೆ ಎಂದು ತಿಳಿಸಿದರು.
ನಿರ್ಮಾಪಕ ಡಾ. ವೈಶಾಖ್ ಜೆ ಗೌಡ, ಬಾಲ್ಯದಿಂದಲೇ ನಿರ್ಮಾಣ ಸಂಸ್ಥೆ ಆರಂಭಿಸುವ ಕನಸು ಕಂಡಿದ್ದೆ ಎಂದು ಹೇಳಿ, ಮೊದಲ ಚಿತ್ರದಲ್ಲೇ ಶಿವರಾಜ್‌ಕುಮಾರ್, ಧನಂಜಯ್ ಮತ್ತು ಹೇಮಂತ್ ಎಂ. ರಾವ್ ಅವರಂತಹ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಅದೃಷ್ಟ ಎಂದರು. ಸುಮಾರು 90 ದಿನಗಳ ಚಿತ್ರೀಕರಣ ಹಾಗೂ 100 ದಿನಗಳ ಸೆಟ್ ನಿರ್ಮಾಣದೊಂದಿಗೆ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದ್ದು, ಚರಣ್ ರಾಜ್ ಅವರ ಸಂಗೀತ ಮತ್ತು ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಹೇಳಿದರು.

ನಿರ್ದೇಶಕ ಹೇಮಂತ್ ಎಂ. ರಾವ್, ಉತ್ತಮ ನಿರ್ಮಾಪಕರಿಗಾಗಿ ಹಲವು ವರ್ಷಗಳ ಹುಡುಕಾಟದ ಬಳಿಕ ವೈಶಾಖ್ ಅವರಂತಹ ಬೆಂಬಲ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ಶಿವರಾಜ್‌ಕುಮಾರ್ ಏಜೆಂಟ್ ಪ್ರಕಾಶ್, ಧನಂಜಯ್ ಏಜೆಂಟ್ ಶಂಕರ್ ಪಾತ್ರಗಳಲ್ಲಿ ನಟಿಸಿದ್ದು, ಪ್ರಿಯಾಂಕಾ ಮೋಹನ್, ಅದಿತಿ ಬಾಲನ್, ಸುಖ್ವಿಂದರ್ ಸಿಂಗ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವೈಶಾಖ್ ಜೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ನೀಡಿದ್ದು, ಈ ವರ್ಷದ ಅಂತ್ಯದಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.
