Cinema News
ಗೋಲ್ಡನ್ ಸ್ಟಾರ್ ಗಣೇಶ್ ‘ಪಿನಾಕ’ ಟೀಸರ್ ರಿಲೀಸ್; ಹೊಸ ಅವತಾರಕ್ಕೆ ಮೆಚ್ಚುಗೆಗಳ ಮಹಾಪೂರ

ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌ನಲ್ಲಿ ವಿಶ್ವಪ್ರಸಾದ್ ನಿರ್ಮಿಸಿರುವ, ಖ್ಯಾತ ನೃತ್ಯ ನಿರ್ದೇಶಕ ಧನಂಜಯ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಪಿನಾಕ’ ಟೀಸರ್ ಬಿಡುಗಡೆಯಾಗಿ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಖಾಸಗಿ ಶಾಲೆಯೊಂದರಲ್ಲಿ ಸಾವಿರಾರು ಮಕ್ಕಳೊಂದಿಗೆ ಆಚರಿಸಿಕೊಂಡಿದ್ದು, ಇದೇ ಸಂದರ್ಭದಲ್ಲಿ ಚಿತ್ರದ ಟೀಸರ್ ಅನಾವರಣಗೊಂಡಿತು. ಟೀಸರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಗಣೇಶ್ ಅವರ ಹೊಸ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ನಿರ್ದೇಶಕ ಧನಂಜಯ್ ಮಾತನಾಡಿ, ಹಲವು ವರ್ಷಗಳ ನೃತ್ಯ ನಿರ್ದೇಶನದ ಅನುಭವದ ಬಳಿಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವುದು ಸಂತಸದ ವಿಚಾರ ಎಂದರು. ಟೀಸರ್‌ನಲ್ಲಿ ಚಿತ್ರದ ಕೇವಲ ಒಂದು ಸಣ್ಣ ಭಾಗವನ್ನು ಮಾತ್ರ ತೋರಿಸಲಾಗಿದೆ. ಚಿತ್ರದ ಪ್ರಮುಖ ಅಂಶಗಳು ಟ್ರೇಲರ್ ಹಾಗೂ ಸಿನಿಮಾದಲ್ಲೇ ಅನಾವರಣವಾಗಲಿದ್ದು, ಕಥೆಯಲ್ಲಿ ಅಧ್ಯಾತ್ಮಿಕ ಅಂಶಗಳಿಗೆ ವಿಶೇಷ ಮಹತ್ವ ನೀಡಲಾಗಿದೆ ಎಂದು ತಿಳಿಸಿದರು.

ನಾಯಕ ಗಣೇಶ್ ಮಾತನಾಡಿ, *’ಮುಂಗಾರು ಮಳೆ’ಯಿಂದ ಆರಂಭವಾದ ತಮ್ಮ ಸಿನಿ ಪಯಣಕ್ಕೆ ಅಭಿಮಾನಿಗಳ ಪ್ರೀತಿ ಹಾಗೂ ಕುಟುಂಬದ ಆಶೀರ್ವಾದವೇ ಕಾರಣ ಎಂದರು. ಶಿವಭಕ್ತನಾಗಿರುವ ಕಾರಣ ಶಿವನ ಹಿನ್ನೆಲೆಯ ಕಥೆಯಾದ *’ಪಿನಾಕ’**ನಲ್ಲಿ ಅಭಿನಯಿಸಿರುವುದು ವಿಶೇಷ ಸಂತಸ ತಂದಿದೆ ಎಂದು ಹೇಳಿದರು. ಚಿತ್ರದ ಕ್ಲೈಮ್ಯಾಕ್ಸ್‌ಗಾಗಿ 22 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಪ್ರೇಕ್ಷಕರು ಇದುವರೆಗೆ ನೋಡಿರದ ಅನುಭವವನ್ನು ಸಿನಿಮಾ ನೀಡಲಿದೆ. ಅಕ್ಟೋಬರ್ 2ರಂದು ಬಿಡುಗಡೆಯಾಗಲಿರುವ ಈ ಚಿತ್ರ ಮನೋರಂಜನೆಯ ಜೊತೆಗೆ ವಿಭಿನ್ನ ಅನುಭವ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಿರ್ಮಾಣದ ಮೇಲ್ವಿಚಾರಕ ವಿಜಯಾ ರಾಜೇಶ್, ಗಣೇಶ್ ಅವರೊಂದಿಗೆ ಸಿನಿಮಾ ನಿರ್ಮಿಸುವುದು ಬಹುಕಾಲದ ಕನಸಾಗಿತ್ತು ಎಂದು ತಿಳಿಸಿದರು. ಉತ್ತಮ ಕಥೆ ಮತ್ತು ಅದ್ದೂರಿ ನಿರ್ಮಾಣ ಮೌಲ್ಯಗಳೊಂದಿಗೆ ಸಿನಿಮಾ ಮೂಡಿಬಂದಿದ್ದು, ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಹ ನಿರ್ಮಾಪಕಿ ಕೃತಿ ಪ್ರಸಾದ್, ಹಿರಿಯ ಕಲಾವಿದರಾದ ರಂಗಾಯಣ ರಘು, ಸಾಧು ಕೋಕಿಲ, ನಾಯಕಿ ಅರ್ಚನಾ ಅಯ್ಯರ್, ನಟರಾದ ರೋಬೊ ಗಣೇಶ್, ರವೀಂದ್ರನಾಥ್ ಹಾಗೂ ಸಂಗೀತ ನಿರ್ದೇಶಕ ಗೌರಾ ಹರಿ ಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು
