Cinema News
ಯೋಗಕ್ಕೆ ಧರ್ಮದ ಹಣೆಪಟ್ಟಿ ಕಟ್ಟಲಾಗಿದೆ: ಅದಿತಿ ಪ್ರಭುದೇವ

ಬೆಂಗಳೂರು: ‘ವಿಶ್ವ ಯೋಗ ದಿನಾಚರಣೆ’ ಹಿನ್ನೆಲೆ ಬೆಂಗಳೂರಿನ ಮಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಯೋಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ತನ್ನ ಭಾವಿ ಪತಿ ಯಶಸ್ ಜೊತೆ ಬಂದು ಯೋಗ ಮಾಡಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು.
ಯೋಗ ಒಂದು ಬ್ರಹ್ಮಾಂಡ. ಯೋಗದಿಂದ ದೇಹ, ಮನಸ್ಸು, ಆತ್ಮ, ಪರಮಾತ್ಮವನ್ನು ಒಟ್ಟಿಗೆ ಸೇರಿಸುತ್ತೆ. ನಮ್ಮನ್ನು ನಾವು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ. ಯೋಗ ಅಭ್ಯಾಸದಿಂದ ಉತ್ತಮ ವ್ಯಕ್ತಿಯಾಗಿ ರೂಪುಕೊಳ್ಳಲು ಸಾಧ್ಯ. ಆದರೆ ಯೋಗಕ್ಕೆ ಒಂದು ಧರ್ಮದ ಹಣೆಪಟ್ಟಿ ಕಟ್ಟಲಾಗಿದೆ ಎಂದು ನಟಿ ಅದಿತಿ ಪ್ರಭುದೇವ್ ಅಸಮಾಧಾನ ವ್ಯಕ್ತಪಡಿಸಿದರು.
ಯೋಗದಲ್ಲಿ ಭಾಗಿಯಾಗಿ ಮಾತನಾಡಿದ ವ್ಯಾಸ ಯೋಗ ವಿವಿ ವಿಸಿ ಡಾ.ಬಿ.ಆರ್.ರಾಮಕೃಷ್ಣ, ಜೀವನ ಶೈಲಿ ಸರಿಯಾಗಿ ನಡೆಸಿಕೊಂಡರೆ ಆರೋಗ್ಯದಲ್ಲಿ ಯಾವುದೇ ಕುಂದುಕೊರತೆಯಾಗುವುದಿಲ್ಲ. ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಜೀವನ ಶೈಲಿ ರೂಪಿಸಬೇಕು. ಬಿಜೆಪಿ ಪಕ್ಷವನ್ನು ಬಲಗೊಳಿಸಬೇಕಾದರೆ ಯೋಗ ಮಾಡಬೇಕು ಎಂದು ಸಂದೇಶ ನೀಡಿದರು.
ಯೋಗ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಳಿನ್ ಕುಮಾರ್ ಮಾತನಾಡಿ, ಮನಸ್ಸು, ಬುದ್ಧಿ, ಆತ್ಮದ ಏಕಾಗ್ರತೆ ಸಾಧಿಸಲು ಯೋಗದಿಂದ ಸಾಧ್ಯ. ಯೋಗ ಮಾಡಿದವರು ಹೇಗಿರುತ್ತಾರೆ ಎಂಬುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉದಾಹರಣೆಯಾಗಿದ್ದಾರೆ. ಯೋಗ ಸುಂದರವಾದ ಆಧ್ಯಾತ್ಮದ ದಾರಿ ಎಂದರು.
