Cinema News
ನಾವು ಸಿನಿಮಾ ಮಾಡೋದು ಬೇರೆಯವರ ರೆಕಾರ್ಡ್ ಬ್ರೇಕ್ ಮಾಡೋಕೆ ಅಲ್ಲ, ಪ್ರೇಕ್ಷಕರ ಮನರಂಜನೆಗಾಗಿ: ಕಿಚ್ಚ ಸುದೀಪ್

ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ `ವಿಕ್ರಾಂತ್ ರೋಣ’ ಸಿನಿಮಾ ಸದ್ಯದಲ್ಲೆ ತೆರೆಗೆ ಬರಲಿದ್ದು ಇದೀಗ ಸುದೀಪ್ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸದ ಮಧ್ಯೆ ಬ್ಯಾಟ್ ಹಿಡಿದು ಗ್ರೌಂಡ್ನಲ್ಲಿ ಮಿಂಚ್ತಿರುವ ಸುದೀಪ್ ಈ ಮಧ್ಯೆ ರಿಲೀಸ್ಗೆ ರೆಡಿಯಿರೋ ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ಅವರಿಗೆ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಇದೇ ಕಾರಣಕ್ಕೆ ಕೊಂಚ ಬಿಡುವು ಸಿಕ್ಕರು ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯುತ್ತಾರೆ. ಅಂತೆಯೇ ಇಂದು ಮುಂಜಾನೆ ಸುದೀಪ್ ಕ್ರಿಕೆಟ್ ಆಡಲು ಮೈದಾನಕ್ಕೆ ಎಂಟ್ರಿಕೊಟ್ಟಿದ್ದಾರೆ. ಪೊಲೀಸ್ ತಂಡದ ಜೊತೆ ಸ್ನೇಹಪೂರ್ವಕ ಪಂದ್ಯ ಆಡಿದ್ದಾರೆ. ಈ ವೇಳೆ ಜುಲೈ 28ಕ್ಕೆ ತೆರೆಗೆ ಬರೋಕೆ ಸಿದ್ದವಾಗಿರುವ `ವಿಕ್ರಾಂತ್ ರೋಣ’ ಚಿತ್ರದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
`ವಿಕ್ರಾಂತ್ ರೋಣ’ ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾವಾಗಿದೆ. ನನ್ನ ಫ್ಯಾನ್ಸ್ ಮಾಡ್ತಿರುವ `ರಾ ರಾ ರಕ್ಕಮ್ಮ’ ರೀಲ್ಸ್ ಬಹಳ ರೀಚ್ ಆಗ್ತಿದೆ. ನಾವು ಸಿನಿಮಾ ಮಾಡೋದು ಬೇರೆಯವರ ರೆಕಾರ್ಡ್ ಬ್ರೇಕ್ ಮಾಡೊವುದಕ್ಕೆ ಅಲ್ಲ. ಪ್ರೇಕ್ಷಕರ ಮನರಂಜನೆಗಾಗಿ, ʻಆರ್ ಆರ್ ಆರ್ʼ ಅವರ ಕಷ್ಟಕ್ಕೆ ಪ್ರತಿಫಲ ಸಿಕ್ಕಿದೆ. `ಕೆಜಿಎಫ್’ ಸಿನಿಮಾದ ಶ್ರಮಕ್ಕೆ ಸಿಗಬೇಕಾದ ಪ್ರತಿಫಲ ಸಿಕ್ಕಿದೆ ಎಂದರು.
ನಾವು ಒಳ್ಳೆಯ ಸಿನಿಮಾ ಮಾಡಲು ಪ್ರಯತ್ನ ಮಾಡ್ತೀವಿ, ಸಕ್ಸಸ್ ಎಷ್ಟು ಸಿಗ್ಬೇಕೊ ಅದು ಸಿಗುತ್ತೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ `ವಿಕ್ರಾಂತ್ ರೋಣ’ ರೆಡಿಯಾಗಿದ್ದು, ತೆರೆಗೆ ಬರಲಿದೆ. ಹಿಂದಿ, ಇಂಗ್ಲಿಷ್ನಲ್ಲಿ `ವಿಕ್ರಾಂತ್ ರೋಣ’ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗ್ತಿದೆ. ಸಲ್ಮಾನ್ ಖಾನ್ ಹಿಂದಿಯಲ್ಲಿ `ವಿಕ್ರಾಂತ್ ರೋಣ’ ಚಿತ್ರದ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ ಎಂದು ತಿಳಿಸಿದರು.
