Cinema News
ವಿಕ್ರಂ ಬರ್ತ್‌ಡೇಗೆ ‘ಮುಧೋಳ್’ ಗಿಫ್ಟ್; ಪ್ರೇಮ್ ಕೈಯಲ್ಲಿ ‘ಗುಚ್ಚಿ ಗರ್ಲ್’ ಬಿಡುಗಡೆ

ಸುಮಾರು ನಾಲ್ಕೈದು ವರ್ಷಗಳ ಬಳಿಕ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಬಹುನಿರೀಕ್ಷಿತ ‘ಮುಧೋಳ್’ ಸಿನಿಮಾದ ಮೊದಲ ಹಾಡು ‘ಗುಚ್ಚಿ ಗರ್ಲ್’ ಬಿಡುಗಡೆಯಾಗಿದ್ದು, ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದೆ. ಶೋಮ್ಯಾನ್ ಪ್ರೇಮ್ ಹಾಡನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ವಿಜಯ್ ಟಾಟಾ, ಅಮೃತ ಟಾಟಾ, ನಿರ್ದೇಶಕ ಕಾರ್ತಿಕ್ ರಂಜನ್, ನಾಯಕಿ ಸಂಜನಾ ಆನಂದ್ ಹಾಗೂ ನೃತ್ಯ ಕಲಾವಿದೆ ಇಷಿತಾ ರಾಜ್ ಸೇರಿದಂತೆ ಚಿತ್ರತಂಡದ ಹಲವರು ಉಪಸ್ಥಿತರಿದ್ದರು.
‘ಗುಚ್ಚಿ ಗರ್ಲ್’ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೇಮ್ ಅವರ ಮಾತುಗಳು ವಿಶೇಷ ಗಮನ ಸೆಳೆದವು. “ನನ್ನ ಬಾಸ್ ಮಗನ ಹಾಡನ್ನು ಬಿಡುಗಡೆ ಮಾಡುತ್ತಿರುವುದು ನನ್ನ ಪುಣ್ಯ” ಎಂದು ಹೇಳಿದ ಅವರು, ‘ಮುಧೋಳ್’ ಸಿನಿಮಾದ ಮುಂದಿನ ಹಂತಗಳಲ್ಲೂ ಚಿತ್ರತಂಡಕ್ಕೆ ತಮ್ಮ ಬೆಂಬಲ ಇರುವುದಾಗಿ ತಿಳಿಸಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವಿಕ್ರಂ ರವಿಚಂದ್ರನ್ ಚಿತ್ರದ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಂಡರು. ‘ಮುಧೋಳ್’ ಪಕ್ಕಾ ಕಮರ್ಷಿಯಲ್ ಅಂಶಗಳೊಂದಿಗೆ ಸಾಗುವ ಸಸ್ಪೆನ್ಸ್ ಓರಿಯೆಂಟೆಡ್ ಸಿನಿಮಾ ಎಂದು ಅವರು ವಿವರಿಸಿದರು. ‘ಗುಚ್ಚಿ ಗರ್ಲ್’ನಲ್ಲಿ ಸಂಜನಾ ಆನಂದ್ ಹಾಗೂ ಇಷಿತಾ ರಾಜ್ ನೃತ್ಯ ಮಾಡಿದ್ದು, ವಿಕ್ರಂ ಕೂಡ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ.

ಸಿನಿಮಾ ಇಷ್ಟು ವರ್ಷಗಳ ಕಾಲ ವಿಳಂಬವಾಗಿದ್ದರ ಹಿಂದಿನ ಕಾರಣವನ್ನೂ ವಿಕ್ರಂ ಬಹಿರಂಗಪಡಿಸಿದ್ದಾರೆ. ನಿರ್ಮಾಪಕರಿಗೆ ಸಂಬಂಧಿಸಿದ ಕೆಲವು ವಿಚಾರಗಳು, ಸಿನಿಮಾವನ್ನು ಮತ್ತಷ್ಟು ಗುಣಮಟ್ಟದಿಂದ ರೂಪಿಸುವ ಪ್ರಯತ್ನ ಹಾಗೂ ಕಥೆಯಲ್ಲಿ ಮಾಡಲಾದ ಬದಲಾವಣೆಗಳಿಂದಾಗಿ ಚಿತ್ರದ ಕೆಲಸಗಳು ತಡವಾಗಿವೆ ಎಂದು ತಿಳಿಸಿದ್ದಾರೆ. ‘ಮುಧೋಳ್’ ನಿರ್ಮಾಣದ ಹಿಂದೆ ತಂದೆ ರವಿಚಂದ್ರನ್ ಅವರ ಸಲಹೆಯೂ ಇದೆ ಎನ್ನುವುದು ವಿಶೇಷ. ಅಷ್ಟೇ ಅಲ್ಲದೆ, ಸಿನಿಮಾಗೆ ‘ಮುಧೋಳ್’ ಎಂಬ ಶೀರ್ಷಿಕೆ ನೀಡುವ ಸಲಹೆಯನ್ನೂ ರವಿಚಂದ್ರನ್ ಅವರೇ ನೀಡಿದ್ದರು ಎಂದು ವಿಕ್ರಂ ಹೇಳಿದ್ದಾರೆ.

ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ವಿಕ್ರಂ, ಸಿನಿಮಾ ನಿರ್ಮಾಣದಲ್ಲಿ ಕ್ರಿಯೇಟಿವಿಟಿ ಜೊತೆಗೆ ಬ್ಯುಸಿನೆಸ್ ದೃಷ್ಟಿಕೋನವೂ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ನಿರ್ಮಾಪಕರಿಗೆ ಉತ್ತಮ ಬ್ಯುಸಿನೆಸ್ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞರ ಮೇಲೂ ಇರಬೇಕು ಎಂದಿರುವ ಅವರು, ಇದೇ ಕಾರಣದಿಂದ ಚಿತ್ರದ ಕೆಲಸಗಳು ನಿರೀಕ್ಷೆಗಿಂತ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ ಎಂದು ಹೇಳಿದ್ದಾರೆ. ಸದ್ಯ ‘ಮುಧೋಳ್’ನ ಮುಂದಿನ ಅಪ್‌ಡೇಟ್‌ಗಳು ಮತ್ತು ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಿದೆ. ಐದು ವರ್ಷಗಳ ಬಳಿಕ ವಿಕ್ರಂ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿರುವುದರ ಜೊತೆಗೆ ‘ಗುಚ್ಚಿ ಗರ್ಲ್’ ಬಿಡುಗಡೆಯಾಗಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
