Cinema News
ಟ್ರೆಂಡಿಂಗ್ ಬೀಟ್ಸ್‌ಗೆ ನಿವೇದಿತಾ ಗೌಡ ಜಬರ್ದಸ್ತ್ ಡ್ಯಾನ್ಸ್; ‘ಬೇಲ್’ನ ‘ಕುಮಾರಿ’ ಸಾಂಗ್ ಧಮಾಕಾ

ಬಹುತಾರಾಗಣದ ಬಹುನಿರೀಕ್ಷಿತ ‘ಬೇಲ್’ ಸಿನಿಮಾದಿಂದ ಮತ್ತೊಂದು ಕುತೂಹಲಕಾರಿ ಅಪ್‌ಡೇಟ್ ಹೊರಬಿದ್ದಿದೆ. ಚಿತ್ರದಲ್ಲಿನ ವಿಶೇಷ ಹಾಡು ‘ಕುಮಾರಿ’ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಕಲರ್‌ಫುಲ್ ಡ್ಯಾನ್ಸ್ ನಂಬರ್‌ನಲ್ಲಿ ನಟಿ ಹಾಗೂ ಸೋಷಿಯಲ್ ಮೀಡಿಯಾ ಸೆನ್ಸೇಷನ್ ನಿವೇದಿತಾ ಗೌಡ ತಮ್ಮ ಆಕರ್ಷಕ ನೃತ್ಯ ಹಾಗೂ ಎನರ್ಜಿಟಿಕ್ ಸ್ಟೆಪ್ಸ್ ಮೂಲಕ ಗಮನ ಸೆಳೆದಿದ್ದಾರೆ. ಹಾಡಿನ ಹುಕ್ ಲೈನ್ ಈಗಾಗಲೇ ಸಿನಿರಸಿಕರ ನಡುವೆ ಕ್ರೇಜ್ ಹುಟ್ಟುಹಾಕಿದ್ದು, ‘ಕುಮಾರಿ ಕುಮಾರಿ’ ಎಂಬ ಸಾಲು ಎಲ್ಲೆಡೆ ಗುನುಗುವಂತಾಗಿದೆ.
ಚಿತ್ರದ ಕಥೆಯಲ್ಲಿ ಸಿನಿಮಾ ಶೂಟಿಂಗ್‌ಗೆ ಸಂಬಂಧಿಸಿದ ಸನ್ನಿವೇಶವೊಂದರಲ್ಲಿ ಮೂಡಿಬರುವ ಈ ವಿಶೇಷ ಹಾಡಿನಲ್ಲಿ ನಿವೇದಿತಾ ಗೌಡ ಅವರೊಂದಿಗೆ ಲೂಸ್ ಮಾದ ಯೋಗಿ ಕೂಡ ಹೆಜ್ಜೆ ಹಾಕಿದ್ದಾರೆ. ಇಬ್ಬರ ಡ್ಯಾನ್ಸ್ ಕೆಮಿಸ್ಟ್ರಿ ಹಾಗೂ ವಿಭಿನ್ನ ನೃತ್ಯ ಸಂಯೋಜನೆ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡಿಗೆ ನಿರ್ದೇಶಕ ಪವನ್ ಒಡೆಯರ್ ಸಾಹಿತ್ಯ ಬರೆದಿದ್ದಾರೆ. ನಕಾಶ್ ಅಜೀಜ್ ಹಾಗೂ ಮಂಗ್ಲಿ ಅವರ ಧ್ವನಿ ‘ಕುಮಾರಿ’ ಹಾಡಿಗೆ ಮತ್ತಷ್ಟು ಮೆರುಗು ನೀಡಿದೆ. ಬಿಡುಗಡೆಯಾದ ಬೆನ್ನಲ್ಲೇ ಹಾಡಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ‘ಬೇಲ್’ ಚಿತ್ರಕ್ಕೆ ಖ್ಯಾತ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಬಂಡವಾಳ ಹೂಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆಯನ್ನು ಪವನ್ ಒಡೆಯರ್ ವಹಿಸಿಕೊಂಡಿದ್ದಾರೆ. ವೈದಿ ಎಸ್. ಅವರ ಛಾಯಾಗ್ರಹಣ ಹಾಗೂ ಶಶಾಂಕ್ ನಾರಾಯಣ್ ಅವರ ಸಂಕಲನ ಚಿತ್ರಕ್ಕಿದೆ. ಕಮರ್ಷಿಯಲ್ ಅಂಶಗಳೊಂದಿಗೆ ಗಟ್ಟಿಯಾದ ಕಥೆಯನ್ನು ಒಳಗೊಂಡಿರುವ ಈ ಸಿನಿಮಾದ ಬಗ್ಗೆ ಪ್ರೇಕ್ಷಕರ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

‘ಬೇಲ್’ನಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್, ಸಾಯಿಕುಮಾರ್, ಮಲಯಾಳಂ ನಟ ಜಯರಾಮ್, ಲೂಸ್ ಮಾದ ಯೋಗಿ, ದೀಕ್ಷಿತ್ ಶೆಟ್ಟಿ ಹಾಗೂ ಸಂಜನಾ ಆನಂದ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ‘ಕುಮಾರಿ’ ಹಾಡಿನ ಮೂಲಕ ಸಿನಿಮಾದ ಪ್ರಚಾರಕ್ಕೆ ಮತ್ತಷ್ಟು ವೇಗ ನೀಡಿರುವ ಚಿತ್ರತಂಡ, ಗಾಂಧಿ ಜಯಂತಿಯ ವಿಶೇಷ ದಿನವಾದ ಅಕ್ಟೋಬರ್ 2ರಂದು ‘ಬೇಲ್’ ಚಿತ್ರವನ್ನು ವಿಶ್ವಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದೆ.
