Cinema News
ರೂಬಿ ಸಿನಿಮಾದ ಟೈಟಲ್ ಮೋಷನ್ ಪೋಸ್ಟರ್ ಅನಾವರಣ… ಇದು ರಘು ಕೋವಿ ಚೊಚ್ಚಲ ಪ್ರಯತ್ನ
 
																								
												
												
											 
ರಾಜ್ಯ ಪ್ರಶಸ್ತಿ ವಿಜೇತ ಬರಹಗಾರ ರಘು ಕೋವಿ ಅವರು ‘ರೂಬಿ’ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಅವರ ಚೊಚ್ಚಲ ಸಿನಿಮಾದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಜರುಗಿತು. ಈ ಸಂದರ್ಭದಲ್ಲಿ ಬರಹಗಾರ ಹಾಗೂ ನಿರ್ದೇಶಕ ಚಂದ್ರಚೂಡ್ ಸೇರಿದಂತೆ ಇಡೀ ತಂಡ ಭಾಗಿಯಾಗಿತ್ತು.
ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆ ಬಳಿಕ ಬರಹಗಾರ ಹಾಗೂ ನಿರ್ದೇಶಕ ಚಂದ್ರಚೂಡ್ ಮಾತನಾಡಿ, ರೂಬಿ ಕಥೆ ಹಾಗೂ ಚಿತ್ರತಂಡ ಚೆನ್ನಾಗಿದೆ. ಒಳ್ಳೊಳ್ಳೆ ಸಿನಿಮಾ ಬರಬೇಕು. ಈ ಹಿಂದೆ ಹಾಡು ಕೇಳಿಸಿದ. ಆ ಹಾಡು ಸೆನ್ಸೇಷನಲ್ ಕ್ರಿಯೇಟ್ ಮಾಡುತ್ತದೆ. ಲಿರಿಕ್ಸ್ ಹಾಗೂ ಮ್ಯೂಸಿಕ್ ಎಲ್ಲವೂ ಚೆನ್ನಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.
ನಟ ರಾಮ್ ಗೌಡ ಮಾತನಾಡಿ, ರಘು ಅವರು ಬಂದು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯ್ತು. ನನ್ನ ಪಾತ್ರ ಹಾಗೂ ಇಡೀ ತಂಡ ಚೆನ್ನಾಗಿದೆ. ಆರ್ ಪಿ ಸರ್ ಮ್ಯೂಸಿಕ್ ಮಾಡ್ತಾ ಇರುವುದು ನನಗೆ ಖುಷಿಯಾಯ್ತು. ನಿರ್ಮಾಪಕರು ತುಂಬಾ ಫ್ಯಾಷನೇಟ್ ಆಗಿದ್ದಾರೆ. ಚಿತ್ರಕ್ಕೆ ಏನೂ ಬೇಕು ಎಲ್ಲವನ್ನೂ ಕೊಟ್ಟಿದ್ದಾರೆ ಎಂದರು.
ನಿರ್ದೇಶಕ ರಘು ಕೋವಿ ಮಾತನಾಡಿ, ನನ್ನ ಕನಸಿಗೆ ಇಬ್ಬರು ನಿರ್ಮಾಪಕರು ಸಾಥ್ ಕೊಟ್ಟಿದ್ದಾರೆ. ಒಂದು ಲವ್ ಸ್ಟೋರಿಯನ್ನು ಮ್ಯೂಸಿಕ್ ಮೂಲಕ ಹೇಳಲು ಸಾಧ್ಯವಿದೆ. ಅದನ್ನು ಆರ್ ಪಿ ಪಟ್ನಾಯಕ್ ಅವರಂತಹ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಹೇಳಿದ್ದಾರೆ. ನಾಯಕ ರಾಮ್ ಕಥೆ ಮತ್ತು ಕಲೆ ಬಗ್ಗೆ ಆಸಕ್ತಿ ಇರುವ ವ್ಯಕ್ತಿ. ಹೈದ್ರಾಬಾದ್ ನಲ್ಲಿ ನಡೆದ ನೈಜ ಘಟನೆಯನ್ನು ರೂಬಿ ಸಿನಿಮಾ ಮೂಲಕ ಹೇಳಲು ಹೊರಟ್ಟಿದ್ದೇವೆ. ಚಿತ್ರದಲ್ಲಿ ಐದು ಹಾಡುಗಳು ಇವೆ. ಶೇಖಡ 50ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಆರ್ ಪಿ ಪಟ್ನಾಯಕ್ ಮಾತನಾಡಿ, ಕಥೆ ತುಂಬಾ ಚೆನ್ನಾಗಿದೆ. ಇದು ಕನ್ನಡ ಇಂಡಸ್ಟ್ರಿಯಲ್ಲಿ ಬೆಸ್ಟ್ ಸಿನಿಮಾವಾಗಲಿದೆ. ರಾಮ್-ವೈಭವಿ ರಾಷ್ಟ್ರಪ್ರಶಸ್ತಿ ಸಿಗುವಷ್ಟು ಚೆನ್ನಾಗಿ ನಟಿಸಿದ್ದಾರೆ. ಈ ಮ್ಯೂಸಿಕಲ್ ಚಿತ್ರದ ಭಾಗವಾಗಿ ಇರುವುದು ನನಗೆ ತುಂಬಾ ಖುಷಿ ಇದೆ. ಚಿತ್ರದಲ್ಲಿ ಒಳ್ಳೆ ಟೆಕ್ನಿಷಿಯನ್ ತಂಡವಿದೆ ಎಂದರು.
ರಘು ಕೋವಿ ಜರ್ನಿ
‘ನಾದಬ್ರಹ್ಮ’ ಹಂಸಲೇಖ ಅವರ ಕಥಾ ಕಣಜದಿಂದ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ರಘು ಕೋವಿ ಅವರು ಅಜಯ್ ರಾವ್ ನಟನೆಯ ‘ಕೃಷ್ಣ ಲೀಲಾ’ ಸಿನಿಮಾಗೆ ಸ್ಕ್ರಿಪ್ಟ್ ಬರೆದಿದ್ದರು. ಅದ್ಕಕಾಗಿ ಅವರು ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಹಿಂದೆ ನಿದೇಶಕರಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಎಂ ಎಸ್ ರಾಜಶೇಖರ್, ಕೆ ವಿ ರಾಜು, ಶಶಾಂಕ್, ಉಪೇಂದ್ರ ಮುಂತಾದವರ ಸಿನಿಮಾಗಳಲ್ಲಿ ಕೋ- ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಇರುವ ರಘು ಕೋವಿ, ಇದೇ ಮೊದಲ ಬಾರಿಗೆ ನಿರ್ದೇಶಕರಾಗಿ ಅಖಾಡಕ್ಕೆ ಇಳಿದಿದ್ದಾರೆ.
ತಾರಾ ಬಳಗದಲ್ಲಿ ಯಾರೆಲ್ಲಾ ಇದ್ದಾರೆ?
ದಿಲ್‌ಮಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಪಾದಾರ್ಪಣೆ ಮಾಡಿದ ರಾಮ್ ಗೌಡ ಅವರು ರೂಬಿಯಲ್ಲಿ ನಾಯಿನಾಗಿ ಅಭಿನಯಿಸುತ್ತಿದ್ದು, ‘ಮಾರ್ಟಿನ್’, ‘ಗಾಳಿಪಟ 2’ ಸಿನಿಮಾಗಳ ಖ್ಯಾತಿಯ ವೈಭವಿ ಶಾಂಡಿಲ್ಯ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.
ತಾಂತ್ರಿಕ ವರ್ಗದ ಮಾಹಿತಿ
ವಂಶಿ, ಆಕಾಶ್ ಮತ್ತು ಎಕ್ಸ್‌ಕ್ಯೂಸ್ ಮಿ ಯ ಚಿತ್ರಗಳಿಗೆ ಸಂಗೀತ ನಿರ್ದೇಶಿಸಿರುವ ಆರ್‌ಪಿ ಪಟ್ನಾಯಕ್ ರೂಬಿಗೆ ಸಂಗೀತ ಒದಗಿಸಿದ್ದಾರೆ. ರಾಜಕುಮಾರ ಮತ್ತು ಯುವರತ್ನ ಚಿತ್ರಗಳ ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾರೆ. ರೋಜಾ, ಬಾಂಬೆ ಮತ್ತು ದಿಲ್ ಸೇ ಮುಂತಾದ ಚಿತ್ರಗಳಿಗೆ ಹೆಸರುವಾಸಿಯಾದ ಸುರೇಶ್ ಅರಸ್ ಸಂಕಲನ ಮಾಡುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಸ್ಟಂಟ್ ಕೊರಿಯೋಗ್ರಾಫರ್ ವಿಕ್ರಮ್ ಮೋರ್ ಅವರು ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ರೂಬಿ ಸಿನಿಮಾವನ್ನು ಈ ಹಿಂದೆ ಓ ಮೈ ಗಾಡ್ 2 ನಿರ್ಮಿಸಿದ ಬಾಲಿವುಡ್ ಬ್ಯಾನರ್ ನಿಖುಲ್ ದೇಸಾಯಿ ಅವರ ಇವಾನ್ ಫಿಲ್ಮ್ಸ್ ನಿರ್ಮಿಸುತ್ತಿದ್ದು, ಶಿವರಾಜ್ ಅವರ ನವಿಶಾ ಫಿಲ್ಮ್ಸ್ ಸಹಯೋಗದೊಂದಿಗೆ ಮೊದಲ ಬಾರಿ ಕನ್ನಡ ಚಿತ್ರ ಎಂಟ್ರಿ ಕೊಡುತ್ತಿದೆ.

ಶಿವರಾಜ ಕನಗನಪಳ್ಳಿ,
ಮನರಂಜನಾ ಲೋಕದಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿರುವ ನಿರ್ಮಾಪಕ ಶಿವರಾಜ ಕನಗನಪಳ್ಳಿ ಈಗ ಕನ್ನಡ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಅವರ ನಿರ್ಮಾಣ ಸಂಸ್ಥೆ Navisha Films ತನ್ನ ಮೊದಲ ಕನ್ನಡ ಚಿತ್ರವಾದ ‘ರೂಬಿ’ ಮೂಲಕ ದೊಡ್ಡ ಪರ್ದೆಗೆ ಕಾಲಿಡುತ್ತಿದೆ. ಟೆಲಿವಿಷನ್ ಕ್ಷೇತ್ರದಲ್ಲಿ ಹಲವು ಯಶಸ್ವಿ ಯೋಜನೆಗಳನ್ನು ನಿರ್ಮಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಶಿವರಾಜ ಕನಗನಪಳ್ಳಿ, ನಿರ್ಮಾಣದ ನಿಷ್ಠೆ ಮತ್ತು ದೃಷ್ಟಿಕೋನದ ಮೂಲಕ ಮನರಂಜನಾ ವಲಯದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ. ಈಗ ಅವರು ತಮ್ಮ ನಿರ್ಮಾಣ ಅನುಭವವನ್ನು ಚಿತ್ರರಂಗದತ್ತ ತಂದು, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ, ಹೊಸ ಕನಸುಗಳಿಗೆ ವೇದಿಕೆ ಕಲ್ಪಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ‘ರೂಬಿ’ ಚಿತ್ರದ ಮೂಲಕ ಅವರು ಕನ್ನಡದ ದೊಡ್ಡ ಪರ್ದೆಯಲ್ಲಿ ಹೊಸ ಪ್ರಯೋಗಕ್ಕೆ ಚಾಲನೆ ನೀಡುತ್ತಿದ್ದಾರೆ.
ಚಿತ್ರತಂಡದವರ ಪ್ರಕಾರ, ಶಿವರಾಜ ಕನಗನಪಳ್ಳಿ ಅವರ Navisha Films ನಿರ್ಮಾಣದ ಬೆಂಬಲ ರೂಬಿ ತಂಡಕ್ಕೆ ಹೊಸ ಶಕ್ತಿ ಮತ್ತು ವಿಶ್ವಾಸವನ್ನು ನೀಡಿದೆ. ಸೃಜನಶೀಲತೆ, ತಾಂತ್ರಿಕ ಗುಣಮಟ್ಟ ಮತ್ತು ನಂಬಿಕೆಯ ಸಂಯೋಜನೆಯಾಗಿ ಮೂಡಿಬರುತ್ತಿರುವ ‘ರೂಬಿ’ — ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ತರಲಿದೆ ಎಂಬ ನಿರೀಕ್ಷೆ ಇದೆ.
 
 
																	
																															 
			 
											 
											 
											 
											 
											 
											 
											 
											