Cinema News
ಮೇ 9 ರಂದು ಶಿವಮೊಗ್ಗದಲ್ಲಿ ಸುಮಂತ್ ಶೈಲೇಂದ್ರ ಅಭಿನಯದ “ಚೇಸರ್” ಚಿತ್ರದ ಹಾಡುಗಳ ಅನಾವರಣ .

ಮಾಲತಿ ಶೇಖರ್ ಶಿವಮೊಗ್ಗ ನಿರ್ಮಾಣದ, ಉಪೇಂದ್ರ ಅಭಿನಯದ “ಬುದ್ದಿವಂತ ೨” ಚಿತ್ರದ ಖ್ಯಾತಿಯ ಜಯರಾಮ್ ನಿರ್ದೇಶನದ ಹಾಗೂ “ದಿಲ್ವಾಲ” ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗ ಪ್ರವೇಶಿಸಿ, ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ “ಚೇಸರ್” ಚಿತ್ರ ಟೀಸರ್ ಮೂಲಕ ಈಗಾಗಲೇ ಜನಪ್ರಿಯವಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳ ಅನಾವರಣ ಸಮಾರಂಭ ಮೇ 9 ರಂದು ಸಂಜೆ 7.30 ಕ್ಕೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಅರಗ ಜ್ಞಾನೇಂದ್ರ, ಶಾಸಕ ಎಸ್ ಎನ್ ಚನ್ನಬಸಪ್ಪ, ಕಾಂಗ್ರೆಸ್ ಮುಖಂಡರಾದ ಎಂ ಶ್ರೀಕಾಂತ್ ಬಿ ವಿ ಶ್ರೀನಿವಾಸ್ ಹಾಗೂ ಖ್ಯಾತ ನಿರ್ದೇಶಕ ಆರ್ ಚಂದ್ರು ಸೇರಿದಂತೆ ಅನೇಕ ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಲವ್ ಜಾನರ್ ಜೊತೆಗೆ ಸಸ್ಪೆನ್ಸ್ ವಿತ್ ಆಕ್ಷನ್ ಕಥಾಹಂದರವನ್ನೂ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಜಯರಾಮ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

ಸುಮಂತ್ ಶೈಲೇಂದ್ರ ಅವರಿಗೆ ನಾಯಕಿಯಾಗಿ ರಕ್ಷ ಮೆನನ್ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಮುಂತಾದವರು “ಚೇಸರ್” ಚಿತ್ರದ ತಾರಾಬಳಗದಲ್ಲಿದ್ದಾರೆ.

