Cinema News
ಶ್ರೀಮುರಳಿ ಬಿಡುಗಡೆ ಮಾಡಿದ ‘ದಿಲ್ದಾರ್’ ಚಿತ್ರದ ‘ಕೂಲ್ ಬ್ರದರ್’ ಸಾಂಗ್!

‘ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ‘ದಿಲ್ದಾರ್’ ಚಿತ್ರದ ‘ಕೂಲ್ ಬ್ರದರ್’ ಹಾಡು ಬಿಡುಗಡೆಯಾಗಿದೆ. ನಟ ಶ್ರೀಮುರಳಿ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಧು ಗೌಡ ಗಂಗೂರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಯಸ್ ಮಂಜು ಮತ್ತೊಮ್ಮೆ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಏನ್ಸಿಯಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಆರ್. ಸಂತೋಷ್ ಕುಮಾರ್ (ಎಸ್ವಿಟಿ) ಚಿತ್ರ ನಿರ್ಮಿಸಿದ್ದು, ಹರೇಕೃಷ್ಣ ರೆಡ್ಡಿ ಎಸ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಟ ಶರಣ್ ಅವರ ಸಹೋದರಿಯ ಮಗಳು ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ, ನಿರ್ಮಾಪಕ ಸಂತೋಷ್ ಹಾಗೂ ಹರಿಕೃಷ್ಣ ತಮ್ಮ ಕ್ಷೇತ್ರದವರಾಗಿರುವುದರಿಂದ ಕಾರ್ಯಕ್ರಮಕ್ಕೆ ಬಂದಿರುವುದಾಗಿ ತಿಳಿಸಿ, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ನಟ ಶ್ರೀಮುರಳಿ ಮಾತನಾಡಿ, ಶ್ರೇಯಸ್ ಮಂಜು ಅವರಿಗೆ ಉತ್ತಮ ಭವಿಷ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಾಡಿನಲ್ಲಿ ತಾವೂ ಕಾಣಿಸಿಕೊಳ್ಳುವಂತೆ ಕೇಳಿದಾಗ ಮೊದಲು ಸಾಧ್ಯವಿಲ್ಲ ಎಂದಿದ್ದಾಗಿ ಹೇಳಿದ ಅವರು, ಶ್ರೇಯಸ್ ಉತ್ತಮವಾಗಿ ನೃತ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ಮಾಪಕ ಕೆ. ಮಂಜು ಅವರು ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಹಾಡು ಉತ್ತಮವಾಗಿ ಮೂಡಿಬಂದಿದೆ ಎಂದರೆ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಶ್ರೇಯಸ್ ತಮ್ಮ ಬಹುಕಾಲದ ಸ್ನೇಹಿತ ಎಂದು ತಿಳಿಸಿದರು. ಗಾಯಕ ಚಂದನ್ ಕೂಡ ಹಾಡಿನ ಬಗ್ಗೆ ಸಂತಸ ಹಂಚಿಕೊಂಡರು.

ನಾಯಕ ಶ್ರೇಯಸ್ ಮಂಜು ಮಾತನಾಡಿ, ಪ್ರೇಕ್ಷಕರು ಎರಡು ಗಂಟೆಗಳ ಕಾಲ ಕುಳಿತು ಮನರಂಜನೆ ಪಡೆಯಬಹುದಾದ ಚಿತ್ರ ಇದಾಗಿದೆ ಎಂದರು. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ‘ಕೂಲ್ ಬ್ರದರ್’ ಡ್ಯಾನ್ಸ್ ನಂಬರ್ ಮೂಲಕ ಪ್ರಚಾರ ಆರಂಭಿಸಲಾಗಿದೆ ಎಂದು ತಿಳಿಸಿದರು. ಇಂದಿನ ಯುವಕ-ಯುವತಿಯರ ಜೀವನಶೈಲಿಯನ್ನು ಆಧರಿಸಿ ಕಥೆ ರೂಪಿಸಲಾಗಿದೆ. ನಾಯಕಿ ಕೀರ್ತಿ ಕೃಷ್ಣ ಉತ್ತಮವಾಗಿ ಅಭಿನಯಿಸಿದ್ದು, ಚಿತ್ರಕ್ಕೆ ಲೋಕಿ ಅವರ ಕೊಡುಗೆಯೂ ಮಹತ್ವದ್ದಾಗಿದೆ ಎಂದು ಹೇಳಿದರು. ನಿರ್ಮಾಪಕ ಸಂತೋಷ್ ತಮ್ಮ ಮೇಲಿಟ್ಟಿರುವ ನಂಬಿಕೆ ಮತ್ತು ಪ್ರೀತಿಯಿಂದ ಈ ಸಿನಿಮಾ ನಿರ್ಮಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು. ನಿರ್ದೇಶಕ ಮಧು ಗೌಡ ಗಂಗೂರ್ ಇದೊಂದು ಪಕ್ಕಾ ಕಮರ್ಷಿಯಲ್ ಮನರಂಜನಾತ್ಮಕ ಚಿತ್ರವಾಗಿದ್ದು, ಸಂಬಂಧಗಳಿಗೆ ಬೆಲೆ ಕೊಡದಿದ್ದರೆ ಎದುರಾಗುವ ಪರಿಣಾಮಗಳನ್ನು ಕಥೆಯ ಮೂಲಕ ಹೇಳಲಾಗಿದೆ ಎಂದರು. ಚಿತ್ರದ ಬಹುಪಾಲು ಕಾಲೇಜು ದೃಶ್ಯಗಳನ್ನು ಮೈಸೂರಿನಲ್ಲಿ ಚಿತ್ರೀಕರಿಸಲಾಗಿದ್ದು, ಬೆಂಗಳೂರು, ಸಕಲೇಶಪುರ ಹಾಗೂ ಮರವಂತೆಯಲ್ಲಿಯೂ ಚಿತ್ರೀಕರಣ ನಡೆಸಲಾಗಿದೆ.
ನಿರ್ಮಾಪಕ ಸಂತೋಷ್ ನಿರ್ದೇಶಕರ ಪರಿಶ್ರಮವನ್ನು ಶ್ಲಾಘಿಸಿದರೆ, ನಾಯಕಿ ಕೀರ್ತಿ ಕೃಷ್ಣ ಹಾಗೂ ಖಳನಟ ಲೋಕಿ ತಮ್ಮ ಪಾತ್ರಗಳ ಕುರಿತು ಮಾತನಾಡಿದರು. ಹಾಸ್ಯ ಕಲಾವಿದರಾದ ಸಾಧು ಕೋಕಿಲಾ, ಚಂದ್ರಪ್ರಭ, ಕಾರ್ತಿಕ್ ಮತ್ತು ಚಿಲ್ಲರ್ ಮಂಜು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ‘ಕೆಜಿಎಫ್’ ಖ್ಯಾತಿಯ ಆಂಡ್ರೋ ಅವಿನಾಶ್ ಹಾಗೂ ಅರ್ಪಿತ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್, ಪ್ರೀತಿ, ಯುವಜನರ ಬದುಕು ಮತ್ತು ಹಾಸ್ಯದ ಅಂಶಗಳನ್ನು ಒಳಗೊಂಡಿರುವ ‘ದಿಲ್ದಾರ್’ ಚಿತ್ರದ ‘ಕೂಲ್ ಬ್ರದರ್’ ಹಾಡು ಬಿಡುಗಡೆಯೊಂದಿಗೆ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
