Cinema News
ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಸಿಂಪಲ್ ಶ್ವೇತಾ ; ಸೆಟ್ಟೇರಿತು ರಹದಾರಿ!!
 
																								
												
												
											 
ಒಂದ್ ಕಥೆ ಹೇಳ್ಲಾ ಚಿತ್ರದ ಮೂಲಕ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಗಿರೀಶ್ ವೈರಮುಡಿ. ಗಿರೀಶ್ ಈಗ ಎರಡನೇ ಚಿತ್ರವನ್ನು ಆರಂಭಿಸಿದ್ದಾರೆ. ಇತಿಹಾಸ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ `ರಹದಾರಿ’ ಚಿತ್ರಕ್ಕೆ ಮುಹೂರ್ತ ನೆರವೇರಿದೆ.
ಬೆಂಗಳೂರು ಮತ್ತು ಪೂಣೆ ಹೈವೇಯಲ್ಲಿ ಲಾರಿಯೊಂದು ಕಳ್ಳತನವಾಗುತ್ತದೆ. ಆ ಪ್ರಕರಣದ ತನಿಖೆಗಾಗಿ ಕೇಂದ್ರ ಸರ್ಕಾರದಿಂದ ನಿಯೋಜನೆಗೊಂಡ ಲೇಡಿ ಆಫೀಸರ್ ಒಬ್ಬರು ಬರುತ್ತಾರೆ. ಆ ಪೊಲೀಸ್ ಅಧಿಕಾರಿಯಾಗಿ ನಟಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸುತ್ತಿದ್ದಾರೆ. ಇನ್ನು ಲಾರಿಯನ್ನು ದೋಚುವ ರಾಬರಿ ತಂಡದ ಸದಸ್ಯರಾಗಿ ಬಾಲಾಜಿ ಮನೋಹರ್, ಕೀರ್ತೇಶ್ ಜಿ.ಎಂ. ಮತ್ತು ಸುಪ್ರಿತಾ ಸತ್ಯನಾರಾಯಣ್ ನಟಿಸುತ್ತಿದ್ದಾರೆ. ಹೀಗೆ ಹೈವೇ ರಾಬರಿ ಸುತ್ತ ಹೆಣೆದ ಕಥೆ ರಹದಾರಿಯಲ್ಲಿದೆ. ಒಂದು ಲಾರಿ ಕಳ್ಳತನವಾದರೆ ಅದಕ್ಕೆ ಯಾಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಚಲನ ಸೃಷ್ಟಿಯಾಗುತ್ತದೆ? ಆ ಲಾರಿಯಲ್ಲಿ ಅಂಥದ್ದೇನಿರುತ್ತದೆ? ಅಸಲಿಗೆ ಲಾರಿ ಮತ್ತು ಅದನ್ನು ದರೋಡೆಕೋರರ ತಂಡ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾ? ಹೀಗೆ ಕ್ಷಣಕ್ಷಣಕ್ಕೂ ಕುತೂಹಲಗಳನ್ನು ತೆರೆದಿಡುವ ರೋಚಕ ಕಥೆ ರಹದಾರಿಯಲ್ಲಿ ಬೆಸೆದುಕೊಂಡಿದೆ.

ಇಲ್ಲಿ ಮತ್ತೊಂದು ವಿಶೇಷತೆಯಿದೆ. ಈ ಕಥೆ ನಡೆಯುವುದು ಸರಿಸುಮಾರು ಹತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ. ಹೀಗಾಗಿ ಚಿತ್ರತಂಡಕ್ಕೆ ಸಾಕಷ್ಟು ಸವಾಲುಗಳಿವೆ. ಹತ್ತು ವರ್ಷಗಳ ಈಚೆಗೆ ಬಂದ ಯಾವ ವಾಹನಗಳೂ ಹೈವೇಯಲ್ಲಿ ಕಾಣದಂತೆ ಎಚ್ಚರವಹಿಸಬೇಕಿದೆ. ಬೆಂಗಳೂರು, ಪೂನಾ ರಾಷ್ಟ್ರೀಯ ಹೆದ್ದಾರಿ ಮತ್ತು ದಾಂಡೇಲಿ ಮುಂತಾದೆಡೆ ಚಿತ್ರೀಕರಣಗೊಳ್ಳಲಿದೆ. ಜನವರಿ ತಿಂಗಳಲ್ಲಿ ಶೂಟಿಂಗ್ ಆರಂಭಿಸಲಿರುವ ರಹದಾರಿ ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣದ ಭಕ್ಕೇಶ್ ಮತ್ತು ಕೆ.ಸಿ ರಾವ್ ಸಂಗೀತ ನೀಡುತ್ತಿದ್ದಾರೆ. ಮುಕ್ತಾಂಭ ಬಸವರಾಜು ನಿಮಿಸುತ್ತಿರುವ ಈ ಚಿತ್ರಕ್ಕೆ ಮಂಜು ಶಾಮನೂರು ಸಹ ನಿರ್ಮಾಪಕರಾಗಿದ್ದಾರೆ.

“ನಾನು ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂಥಾ ಅದ್ಭುತ ಪಾತ್ರ ಈ ರಹದಾರಿ ಚಿತ್ರದಲ್ಲಿ ದೊರಕಿದೆ. ಈ ಪಾತ್ರದಲ್ಲಿ ಖಂಡಿತವಾಗಿಯೂ ನಾನು ಭಿನ್ನವಾಗಿ ಕಾಣಿಸಿಕೊಳ್ಳಲಿದ್ದೇನೆ ಎನ್ನುವ ನಂಬಿಕೆ ಇದೆ. ನಿರ್ದೇಶಕ ಗಿರೀಶ್ ವೈರಮುಡಿ ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಅಷ್ಟೇ ಹೊಸತನದಿಂದ ಚಿತ್ರ ರೂಪಿಸಲು ತಯಾರಿ ಮಾಡಿಕೊಂಡಿದ್ದಾರೆ. ಒಂದೊಂದು ಕ್ಷಣಕ್ಕೂ ಯಾರೂ ಊಹಿಸದಂತಾ ತಿರುವುಗಳು ಎದುರಾಗುತ್ತಿರುತ್ತದೆ. ಈ ಚಿತ್ರವನ್ನು ನಿರ್ಮಿಸುತ್ತಿರುವ ಇತಿಹಾಸ ಪ್ರೊಡಕ್ಷನ್ ಮತ್ತು ಮುಕ್ತಾಂಭ ಬಸವರಾಜು ಅವರಿಗೂ ಈ ಚಿತ್ರ ಉತ್ತಮ ಯಶಸ್ಸು ಮತ್ತು ಲಾಭ ತಂದುಕೊಡಲಿದೆ’’ ಎಂದಿದ್ದಾರೆ ಶ್ವೇತಾ ಶ್ರೀವಾತ್ಸವ್.
ಥ್ರಿಲ್ಲರ್ ಕಥಾವಸ್ತು ಹೊಂದಿರುವ ರಹದಾರಿ ಚಿತ್ರದಲ್ಲಿ ಇನ್ನೂ ಹಲವಾರು ಬಗೆಯ ವಿಶೇಷತೆಗಳಿದ್ದು ಹಂತಹಂತವಾಗಿ ಅದನ್ನು ತಿಳಿಸುವುದಾಗಿ ನಿರ್ದೇಶಕ ಗಿರೀಶ್ ವೈರಮುಡಿ ತಿಳಿಸಿದ್ದಾರೆ.
 
 
																	
																															 
			 
											 
											 
											 
											 
											 
											 
											 
											