Cinema News
175ನೇ ಸಿನಿಮಾದೊಂದಿಗೆ ಹೊಸ ಅಧ್ಯಾಯ ಆರಂಭಿಸಿದ ಶೃತಿ.. ಮಂಡ್ಯದ ಮಹಿಳೆಯ ಹೋರಾಟದ ಕಥೆ ಹೇಳಲಿದೆ ‘ಮದರ್’

ಅಭಿನಯ ಸರಸ್ವತಿ ಶೃತಿ ಅವರ ವೃತ್ತಿಜೀವನದ 175ನೇ ಸಿನಿಮಾ ‘ಮದರ್’ಗೆ ಇಂದು ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಧಿವತ್ತಾಗಿ ಮುಹೂರ್ತ ನೆರವೇರಿತು. ಕಾರ್ಯಕ್ರಮಕ್ಕೆ ನಟ ವಿನೋದ್ ಪ್ರಭಾಕರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರೆ, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ ಹಾಗೂ ಅನೇಕ ಗಣ್ಯರು ಭಾಗವಹಿಸಿ ಶುಭ ಕೋರಿದರು.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ರಾಕೇಶ್ ಸೋಮಣ್ಣ, ‘ಮದರ್’ ಒಂದು ಭಾವನಾತ್ಮಕ ಹಾಗೂ ಶಕ್ತಿಶಾಲಿ ಕಥಾಹಂದರ ಹೊಂದಿರುವ ಸಿನಿಮಾ ಎಂದು ತಿಳಿಸಿದರು. ಮಂಡ್ಯದ ಅನಕ್ಷರಸ್ಥ ಮಹಿಳೆಯೊಬ್ಬಳು ತನ್ನ ಕುಟುಂಬವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದ ಸುತ್ತ ಕಥೆ ಸಾಗಲಿದ್ದು, ಇದುವರೆಗೆ ಕಾಣದ ವಿಭಿನ್ನ ಶೇಡ್ನಲ್ಲಿ ಶೃತಿ ಅವರು ಅಭಿನಯಿಸಲಿದ್ದಾರೆ ಎಂದರು. ಸುಮಾರು 35 ದಿನಗಳ ಕಾಲ ಮಂಡ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಶೃತಿ ಅವರನ್ನು ರಗಡ್ ಅವತಾರದಲ್ಲಿ ಪ್ರೇಕ್ಷಕರು ಕಾಣಲಿದ್ದಾರೆ ಎಂದು ಹೇಳಿದರು.

ನಟ ವಿನೋದ್ ಪ್ರಭಾಕರ್ ಮಾತನಾಡಿ, ಶೃತಿ ಅವರನ್ನು ತಾವು ಅಮ್ಮ ಎಂದೇ ಕರೆಯುತ್ತೇನೆ ಎಂದು ಹೇಳಿ, 175 ಸಿನಿಮಾಗಳ ಮೈಲಿಗಲ್ಲು ಸಾಧಿಸುವುದು ಸುಲಭದ ಕೆಲಸವಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ‘ಮಾದೇವ’ ಚಿತ್ರದ ಸಮಯದಿಂದಲೂ ಅವರೊಂದಿಗೆ ಉತ್ತಮ ಬಾಂಧವ್ಯವಿದ್ದು, ಕನ್ನಡ ಚಿತ್ರರಂಗದಲ್ಲಿ ಶೃತಿ ಅವರಿಗೆ ಪರ್ಯಾಯ ಯಾರೂ ಇಲ್ಲ ಎಂದು ಹೇಳಿದರು. ಇದೇ ವೇಳೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿರಂಜೀವಿ, ಚಿತ್ರದಲ್ಲಿ ಶೃತಿ ಅವರ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿ, ವಿಭಿನ್ನ ಗೆಟಪ್ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದೇನೆ ಎಂದು ಹೇಳಿದರು.

ಶಾಂತ್ವು ಬ್ಯಾನರ್ ಅಡಿಯಲ್ಲಿ ಆರತಿ ಹಾಗೂ ಕೆ. ಸತೀಶ್ ಚಂದ್ರ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶೃತಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ, ಪ್ರಸನ್ನ ಶೆಟ್ಟಿ, ಅರ್ಚನಾ ಹೆಗ್ಡೆ, ಅಭಯ್ ಪುನೀತ್, ಗೀತಾಂಜಲಿ, ಹಿಮಶ್ರೀ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಅಂಜನ್ ಸಂಗೀತ, ಯು. ಅಶ್ವಿನ್ ಛಾಯಾಗ್ರಹಣ, ವಸಂತ್ ಸಂಕಲನ ಹಾಗೂ ನಾಗಾರ್ಜುನ ಶರ್ಮಾ ಸಾಹಿತ್ಯ ಚಿತ್ರಕ್ಕಿದೆ. ಚಿತ್ರರಂಗದಲ್ಲಿ ಇಷ್ಟು ವರ್ಷಗಳ ಪಯಣ ಸಾಧ್ಯವಾಗಲು ನಿರ್ಮಾಪಕರೇ ಕಾರಣ ಎಂದು ಹೇಳಿದ ಶೃತಿ, ‘ಮದರ್’ ಮೂಲಕ ಮತ್ತೊಂದು ವಿಶೇಷ ಪಾತ್ರದಲ್ಲಿ ಪ್ರೇಕ್ಷಕರನ್ನು ಭೇಟಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.
