Cinema News
ರಾಜವರ್ಧನ್ ನಟನೆಯ ‘ಹಿರಣ್ಯ’ನಿಗೆ ಕುಂಬಳಕಾಯಿ…ಶೀಘ್ರದಲ್ಲಿಯೇ ಬಾಕಿ ಸುದ್ದಿ

ಮ್ಯಾಸೀವ್ ಸ್ಟಾರ್ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ಹಿರಣ್ಯ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದೆ. ಬೆಂಗಳೂರು ಸುತ್ತಮುತ್ತ ಇಡೀ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ಹಿರಣ್ಯ ಸಿನಿಮಾಗೆ ಪ್ರವೀಣ್ ಅವ್ಯುಕ್ತ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಹಲವು ಶಾರ್ಟ್ ಮೂವಿಗಳನ್ನು ಮಾಡಿದ ಅನುಭವ ಇರುವ ಪ್ರವೀಣ್ ಅವ್ಯೂಕ್ತ್ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನಾಗಿ ಸ್ಯಾಂಡಲ್ ವುಡ್‌ಗೆ ಪರಿಚಯವಾಗುತ್ತಿದ್ದಾರೆ. ರಾಜವರ್ಧನ್ ಗೆ ಜೋಡಿಯಾಗಿ ಮಾಡೆಲ್ ರಿಹಾನಾ ನಟಿಸಿದ್ದು, ಈ ಚಿತ್ರದ ಮೂಲಕ ರಿಹಾನಾ ಚಂದನವನ ಪ್ರವೇಶಿಸಿದ್ದಾರೆ.

ಕಂಪ್ಲೀಟ್ ಆಕ್ಷನ್ ಥ್ರಿಲ್ಲರ್ ಜೊತೆಗೆ ತಾಯಿ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದು, ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
“ವೇದಾಸ್ ಇನ್ಫಿನಿಟಿ ಪಿಕ್ಚರ್’ ಬ್ಯಾನರ್‌ನಡಿ ವಿಘ್ನೇಶ್ವರ. ಯು ಹಾಗೂ ವಿಜಯ್ ಕುಮಾರ್ ಬಿ.ವಿ “ಹಿರಣ್ಯ’ ಸಿನಿಮಾಗೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಯೋಗೇಶ್ವರನ್ ಆರ್ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನ ನಡೆಸುತ್ತಿದೆ
