Cinema News
ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ

ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಭಕ್ತಿಪ್ರದಾನ ಚಿತ್ರಗಳಿಗೆ ಹೆಸರಾದವರು. ಈಗಾಗಲೇ ಹಲವಾರು ಭಕ್ತಿರಸ ಸಾರುವ ಚಿತ್ರಗಳನ್ನು ನಿರ್ದೇಶಿಸಿರುವ ಅವರೀಗ ಭಕ್ತರನ್ನು ಸದಾ ಕಾಯುವ ತಾಯಿ ಶ್ರೀಹುಲಿಗೆಮ್ಮ ದೇವಿಯ ಕಥೆಯನ್ನು ಹೇಳಹೊರಟಿದ್ದಾರೆ. ‘ವಿಶ್ವರೂಪಿಣಿ ಹುಲಿಗೆಮ್ಮ’ ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ಕೊಪ್ಪಳ ತಾಲ್ಲೂಕಿನ ಶ್ರೀಹುಲಿಗೆಮ್ಮ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಕುರಿತಂತೆ ಮಾತನಾಡಿದ ಅವರು, ಹುಲಿಗೆಮ್ಮ ದೇವಿಯ ಮಹಿಮೆ ಬಹಳ ದೊಡ್ಡದು, ಭಕ್ತರು ಬೇಡಿದ್ದನ್ನು ಕರುಣಿಸುವ ಆ ತಾಯಿಯ ಚಿತ್ರಕ್ಕೆ ನನ್ನನ್ನು ಆಯ್ಕೆಮಾಡಿದ್ದು ತುಂಬಾ ಸಂತೋಷವಾಗಿದೆ, ಮೊದಲಬಾರಿಗೆ ನಾನು ಭಕ್ತಿಪ್ರದಾನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದೂ ಸಾಯಿಪ್ರಕಾಶ್ ಅವರು ಚಿತ್ರವನ್ನು ನಿರ್ದೇಶಿಸುತ್ತಿರುವುದು ಇನ್ನೂ ಖುಷಿಯಾಗಿದೆ ಎಂದು ಹೇಳಿದರು,

ನಂತರ ನಿರ್ದೇಶಕ ಸಾಯಿಪ್ರಕಾಶ್ ಮಾತನಾಡುತ್ತ ಇದು ನನ್ನ ನಿರ್ದೇಶನದ ೧೦೫ನೇ ಚಿತ್ರ. ಕಲ್ಯಾಣ ಕರ್ನಾಟಕದ ಜನರ ಮಾತೆ ಶ್ರೀಹುಲಿಗೆಮ್ಮ ದೇವಿಯ ಚರಿತ್ರೆಯನ್ನು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದೇನೆ. ಸಂಜಯಕುಮಾರ್ ಅವರು ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಭಾವನಾ ಪ್ರೊಡಕ್ಷನ್ಸ್ ಮೂಲಕ ಗೌರಮ್ಮ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹುಲಿಗೆಮ್ಮ ದೇವಿಯ ಚರಿತ್ರೆಯನ್ನು ಇಡೀ ವಿಶ್ವಕ್ಕೆ ತೋರಿಸುವಂತಹ ಕಾರ್ಯವನ್ನು ಈ ತಂಡ ಮಾಡುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕರಾದ ಗೌರಮ್ಮ, ನಟಿ ಭಾವನಾ, ಹಾಸ್ಯನಟ ಸಂಜು ಬಸಯ್ಯ, ನಟಿ ಕವಿತಾ ಅಪೂರ್ವ ಸೇರಿದಂತೆ ಚಿತ್ರತಂಡದ ಎಲ್ಲರೂ ಉಪಸ್ಥಿತರಿದ್ದರು. ಅಣಜಿ ನಾಗರಾಜ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ.
