Cinema News
ಸೆಪ್ಟೆಂಬರ್ 25ಕ್ಕೆ ‘ಪ್ರೇಮದ ಊರಲಿ’ ಗ್ರ್ಯಾಂಡ್ ಎಂಟ್ರಿ; ಹಾಡುಗಳ ಹವಾ ಜೋರು!

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಪ್ರೇಮದ ಊರಲಿ’ ಸಿನಿಮಾ ಸೆಪ್ಟೆಂಬರ್ 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶ್ರೀರಾಮ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿಯರಾಗಿ ಅಭಿನಯಿಸಿದ್ದು, ಹಿರಿಯ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವುದರ ಜೊತೆಗೆ ಸಿನಿಮಾದ ನಿರ್ಮಾಣದ ಅನುಭವ ಮತ್ತು ಹಾಡುಗಳಿಗೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆಯ ಕುರಿತು ಮಾಹಿತಿ ಹಂಚಿಕೊಂಡಿತು.
ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾದ ಬಳಿಕ ಮಾಧ್ಯಮಗಳು ಮತ್ತು ಪ್ರೇಕ್ಷಕರು ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ‘ಪ್ರೇಮದ ಊರಲಿ’ಯ ಎಲ್ಲಾ ಹಾಡುಗಳು ಈಗಾಗಲೇ ಜನಪ್ರಿಯವಾಗಿದ್ದು, ನಾಗಣ್ಣನ ಸುಂದರ ಕುಟುಂಬದ ಸುತ್ತ ಸಾಗುವ ಕಥೆಯಲ್ಲಿ ಪ್ರೀತಿ, ಕೌಟುಂಬಿಕ ಬಾಂಧವ್ಯ ಮತ್ತು ಸಂಗೀತ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು. ಗ್ರಾಮೀಣ ಹಿನ್ನೆಲೆಯ ಈ ಕೌಟುಂಬಿಕ ಕಥೆ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ರಂಗಾಯಣ ರಘು ಅವರ ಅನುಭವಿ ಅಭಿನಯ ಹಾಗೂ ಶ್ರೀರಾಮ್ ಮತ್ತು ಇಬ್ಬರು ನಾಯಕಿಯರ ಉತ್ತಮ ನಟನೆ ಚಿತ್ರದ ಪ್ರಮುಖ ಆಕರ್ಷಣೆಗಳಾಗಿವೆ ಎಂದರು.

ನಾಯಕ ಶ್ರೀರಾಮ್ ಮಾತನಾಡಿ, ಚಿತ್ರದ ಟೈಟಲ್ ಟ್ರ್ಯಾಕ್ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, 1.5 ಲಕ್ಷಕ್ಕೂ ಅಧಿಕ ರೀಲ್ಸ್ಗಳು ಸೃಷ್ಟಿಯಾಗಿರುವುದು ಸಂತಸ ತಂದಿದೆ ಎಂದರು. ಆಟೋ ಚಾಲಕರು ಚಿತ್ರದ ಹೆಸರಿನ ಸ್ಟಿಕ್ಕರ್ಗಳನ್ನು ತಮ್ಮ ವಾಹನಗಳಿಗೆ ಅಂಟಿಸಿಕೊಂಡು ಸಿನಿಮಾದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಿರುವುದನ್ನೂ ಅವರು ನೆನಪಿಸಿಕೊಂಡರು. ಸಿನಿಮಾವನ್ನು ಬೆಂಬಲಿಸಿದ ನಿರ್ಮಾಪಕರು, ಅತ್ಯುತ್ತಮ ದೃಶ್ಯಗಳನ್ನು ಕಟ್ಟಿಕೊಟ್ಟ ಛಾಯಾಗ್ರಾಹಕರು ಹಾಗೂ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಯಕಿಯರಿಗೆ ಧನ್ಯವಾದ ಅರ್ಪಿಸಿದರು. ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಕೂಡ ಪ್ರೇಕ್ಷಕರನ್ನು ಪ್ರೀತಿಯಿಂದ ಚಿತ್ರಮಂದಿರಕ್ಕೆ ಆಹ್ವಾನಿಸಿದರು.

ರಂಗಾಯಣ ರಘು ಮಾತನಾಡಿ, ‘ಪ್ರೇಮದ ಊರಲಿ’ಯಲ್ಲಿನ ತಮ್ಮ ಪಾತ್ರ ಕಲಾವಿದನಾಗಿ ತಮಗೆ ವಿಶೇಷ ತೃಪ್ತಿ ಹಾಗೂ ನೆಮ್ಮದಿ ನೀಡಿದೆ ಎಂದು ಹೇಳಿದರು. ಕನ್ನಡದ ಮಣ್ಣಿನ ಸೊಗಡಿನೊಂದಿಗೆ ಗ್ರಾಮೀಣ ಬದುಕನ್ನು ಪ್ರತಿಬಿಂಬಿಸುವ ಕಥೆ ಇದಾಗಿದ್ದು, ಕನ್ನಡಾಭಿಮಾನಿಗಳು ಸಿನಿಮಾವನ್ನು ಖಂಡಿತವಾಗಿ ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ವೆನಿಲ್ಲಾ ಎಂಟರ್ಟೇನ್ಮೆಂಟ್ಸ್ ಹಾಗೂ ಜಾನಕಮ್ಮ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ, ರಾಜ್ಕಾಂತ್ ಎಸ್.ಕೆ ಛಾಯಾಗ್ರಹಣ ಮತ್ತು ಹರ್ಷಿತ್ ಪ್ರಭು ಸಂಕಲನ ನೀಡಿದ್ದಾರೆ. ಪ್ರೀತಿ, ಸಂಗೀತ ಮತ್ತು ಕೌಟುಂಬಿಕ ಭಾವನೆಗಳ ಸಂಗಮವಾಗಿರುವ ‘ಪ್ರೇಮದ ಊರಲಿ’ ಸೆಪ್ಟೆಂಬರ್ 25ರಂದು ಬೆಳ್ಳಿತೆರೆಗೆ ಬರಲಿದೆ.
