Connect with us

Cinema News

ಒರಟ ಶ್ರೀ ನಿರ್ದೇಶನದ ‘ಶಬರಿ’ ಟ್ರೈಲರ್ ಬಿಡುಗಡೆ: ಅಕ್ಟೋಬರ್ 23ಕ್ಕೆ ಸಿನಿಮಾ ತೆರೆಗೆ!

Published

on

ಸ್ಯಾಂಡಲ್‌ವುಡ್‌ನಲ್ಲಿ ಕೌಟುಂಬಿಕ ಕಥಾಹಂದರದ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುತ್ತಿರುವ ಹೊತ್ತಿನಲ್ಲಿ, ಮತ್ತೊಂದು ವಿಭಿನ್ನ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾಗಿ ‘ಶಬರಿ’ ತೆರೆಗೆ ಬರಲು ಸಜ್ಜಾಗಿದೆ. ‘ಒರಟ’, ‘ಕೋರ’ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಒರಟ ಶ್ರೀ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ದೇಶಕ ರವಿ ಶ್ರೀವತ್ಸ, ನಟ ಒರಟ ಪ್ರಶಾಂತ್, ಉದ್ಯಮಿ ಪ್ರಶಾಂತ್ ಚಕ್ರವರ್ತಿ, ನಟರಾದ ಪ್ರವೀಣ್ ಮತ್ತು ಕೋಟೆ ಪ್ರಭಾಕರ್, ನಟಿ ಭೂಮಿಕಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು. ಭಾರವಿ ಫಿಲಂಸ್ ಬ್ಯಾನರ್‌ನಲ್ಲಿ ರಮೇಶ್ ಬಿ., ಬದ್ರಿ ಹಾಗೂ ವಿಷ್ಣುಕಾಂತ್ ಎ. ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ವೀಕ್ಷಿಸಬಹುದಾದ ಸಿನಿಮಾ ಇದಾಗಿದ್ದು, ಪ್ರೇಕ್ಷಕರು ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕೆಂದು ನಿರ್ಮಾಪಕರು ಮನವಿ ಮಾಡಿದರು.

ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಒರಟ ಶ್ರೀ, ಚಿತ್ರದ ‘ತಂದಾನಿ ತಾನೋ..’ ಹಾಡು ಲಹರಿ ಆಡಿಯೋ ಮೂಲಕ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ ಎಂದು ಸಂತಸ ಹಂಚಿಕೊಂಡರು. ತಮ್ಮ ಗುರುಗಳು ಹಾಗೂ ಸ್ನೇಹಿತರು ಆಗಮಿಸಿ ಟ್ರೈಲರ್ ಬಿಡುಗಡೆ ಮಾಡಿದ್ದು ಖುಷಿ ತಂದಿದೆ ಎಂದರು. ತಂದೆ–ಮಗಳ ಭಾವನಾತ್ಮಕ ಸಂಬಂಧದ ಜೊತೆಗೆ ಜೀಪ್ ಕೂಡ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ಕುತೂಹಲಕಾರಿ ವಿಚಾರವನ್ನು ಬಹಿರಂಗಪಡಿಸಿದರು. ನಿಗದಿತ ಬಜೆಟ್ ಮತ್ತು ಸಮಯದೊಳಗೆ ಚಿತ್ರೀಕರಣ ಪೂರ್ಣಗೊಳಿಸಿರುವುದಾಗಿ ತಿಳಿಸಿದ ಅವರು, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮಿಸ್ಟರಿ ಅಂಶಗಳೊಂದಿಗೆ ಮನರಂಜನೆ ಮತ್ತು ಕೌಟುಂಬಿಕ ಭಾವನೆಗಳನ್ನು ಒಳಗೊಂಡ ಚಿತ್ರವನ್ನು ರೂಪಿಸಿರುವುದಾಗಿ ಹೇಳಿದರು. ನಾಯಕ ಸಮರ್ಥ್ ಶ್ರಮಪಟ್ಟು ಅಭಿನಯಿಸಿದ್ದು, ನಾಯಕಿ ಕೃತಿಕಾ ಗೌಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ‘ರಾಣಿ’ ಧಾರಾವಾಹಿಯ ಮೂಲಕ ಪರಿಚಿತರಾಗಿರುವ ಬಾಲನಟಿ ಧನ್ವಿ ಕೂಡ ಉತ್ತಮವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರವು ಅಕ್ಟೋಬರ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರ ಸಹಕಾರ ಕೋರಿದರು.

ಚಿತ್ರದ ನಾಯಕ ಸಮರ್ಥ್ ಮಾತನಾಡಿ, ಇದು ತಮ್ಮ ವೃತ್ತಿಜೀವನದ ಮೊದಲ ಸಿನಿಮಾವಾಗಿದ್ದು, ಸದಾ ನೆನಪಿನಲ್ಲಿ ಉಳಿಯುವಂತಹ ಪಾತ್ರ ದೊರೆತಿದೆ ಎಂದರು. ನಿರ್ದೇಶಕರ ಮಾರ್ಗದರ್ಶನದಲ್ಲಿ ಅಭಿನಯಿಸಿದ್ದು, ಸಹಕಲಾವಿದರಿಂದಲೂ ಉತ್ತಮ ಬೆಂಬಲ ಸಿಕ್ಕಿದೆ ಎಂದು ತಿಳಿಸಿದರು. ತಮ್ಮ ತಂದೆಯೂ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವುದರಿಂದ ಈ ಸಿನಿಮಾ ತಮಗೆ ವಿಶೇಷವಾದದ್ದು ಎಂದು ಹೇಳಿ, ಪ್ರೇಕ್ಷಕರು ಚಿತ್ರವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ನಾಯಕಿ ಕೃತಿಕಾ ಗೌಡ ಮಾತನಾಡಿ, ತಾವು ನಟಿಸಿದ್ದ ‘ಕಿರಾತಕ’ ಕಿರುಚಿತ್ರವನ್ನು ವೀಕ್ಷಿಸಿದ ನಿರ್ದೇಶಕ ಒರಟ ಶ್ರೀ ಈ ಚಿತ್ರಕ್ಕೆ ಅವಕಾಶ ನೀಡಿದರು ಎಂದು ಹೇಳಿದರು. ‘ಶಬರಿ’ಯಲ್ಲಿ ತಮ್ಮ ಪಾತ್ರ ವಿಭಿನ್ನವಾಗಿದ್ದು, ಪ್ರೇಕ್ಷಕರು ಚಿತ್ರಮಂದಿರದಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಕೋರಿದರು. ಬಾಲನಟಿ ಧನ್ವಿ ಕೂಡ ತಮ್ಮ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿ, ಚಿತ್ರೀಕರಣದ ವೇಳೆ ಚಿತ್ರತಂಡದವರು ಪ್ರೀತಿಯಿಂದ ನೋಡಿಕೊಂಡರು ಎಂದು ಸಂತಸ ಹಂಚಿಕೊಂಡರು.

ಚಿತ್ರದಲ್ಲಿ ಎಂ.ಕೆ. ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್, ಯೋಗೇಶ್ ವೀರ್, ಮಂಡ್ಯ ಸಿದ್ದು ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಬಿ.ಆರ್. ಹೇಮಂತ್ ಕುಮಾರ್ ಸಂಗೀತ ಸಂಯೋಜನೆ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ ಹಾಗೂ ಕೆ. ಗಿರೀಶ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಕೌಟುಂಬಿಕ ಭಾವನೆಗಳ ಜೊತೆಗೆ ನಿಗೂಢತೆ ಮತ್ತು ರೋಚಕ ತಿರುವುಗಳನ್ನು ಒಳಗೊಂಡಿರುವ ‘ಶಬರಿ’ಯಲ್ಲಿ ನಿಜವಾದ ಶಬರಿ ಯಾರು ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬೇಕಿದೆ. ಅಕ್ಟೋಬರ್ 23ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಚಿತ್ರತಂಡ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

Spread the love

Continue Reading