Cinema News
‘ಕಾರ್ ಕಾರ್’ ಬಳಿಕ ‘ರನ್ ರನ್’: ನಾಗತಿಹಳ್ಳಿ–ಮನೋಮೂರ್ತಿ ಜೋಡಿಯಿಂದ ಹೊಸ ಹಾಡಿನ ಸದ್ದು!

‘ಕಾರ್ ಕಾರ್ ಎಲ್ಲೋಡಿ ಕಾರ್’ನಂತಹ ಸೂಪರ್ಹಿಟ್ ಹಾಡು ನೀಡಿದ್ದ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಜೋಡಿ ಇದೀಗ ‘ಅಮೇರಿಕಾ ಅಮೇರಿಕಾ 2’ ಚಿತ್ರದ ‘ರನ್ ರನ್’ ಹಾಡಿನ ಮೂಲಕ ಮತ್ತೊಮ್ಮೆ ಸಂಗೀತ ಪ್ರಿಯರ ಮುಂದೆ ಬಂದಿದೆ. ಬಹುನಿರೀಕ್ಷಿತ ಈ ಚಿತ್ರದ ಮೊದಲ ಗೀತೆ ಬಿಡುಗಡೆಯಾಗಿದ್ದು, ಇದೇ ಸಂದರ್ಭದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ತಮ್ಮ ದಶಕಗಳ ಸ್ನೇಹ ಮತ್ತು ಸಂಗೀತ ಪಯಣದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ತೆರೆಕಾಣಲಿದೆ.
90ರ ದಶಕದಲ್ಲಿ ಬಿಡುಗಡೆಯಾದ ‘ಅಮೇರಿಕಾ ಅಮೇರಿಕಾ’ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದ ಸಿನಿಮಾ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಿಂದ ಮನೋಮೂರ್ತಿ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು. ‘ನೂರು ಜನುಮಕ್ಕೂ’, ‘ಯಾವ ಮೋಹನ ಮುರಳಿ ಕರೆಯಿತು’, ‘ಹೇಗಿದೆ ನಮ್ ದೇಶ’ ಸೇರಿದಂತೆ ಚಿತ್ರದ ಹಲವು ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಬಳಿಕ ‘ಅಮೃತಧಾರೆ’, ‘ನನ್ನ ಪ್ರೀತಿಯ ಹುಡುಗಿ’ ಹಾಗೂ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರಗಳಲ್ಲೂ ಈ ಜೋಡಿಯ ಸಂಗೀತದ ಸೊಗಸು ಮುಂದುವರಿದಿತ್ತು.

‘ಅಮೇರಿಕಾ ಅಮೇರಿಕಾ’ಯಿಂದ ‘ಒಲವೇ ಜೀವನ ಲೆಕ್ಕಾಚಾರ’ದವರೆಗೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಆರು ಸಿನಿಮಾಗಳಿಗೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಇದೀಗ ‘ಅಮೇರಿಕಾ ಅಮೇರಿಕಾ 2’ ಈ ಜೋಡಿಯ ಕಾಂಬಿನೇಶನ್ನ ಏಳನೇ ಚಿತ್ರವಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ರಚಿಸಿರುವ ‘ರನ್ ರನ್’ ಹಾಡಿಗೆ ಶಂಕರ್ ಮಹದೇವನ್ ಮತ್ತು ಶ್ರೇಯಾ ಘೋಷಾಲ್ ಧ್ವನಿಯಾಗಿದ್ದಾರೆ. ಖ್ಯಾತ ಲೇಖಕ ಹಾಗೂ ಸಂಪಾದಕ ಜೋಗಿ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನೂ ಅಧಿಕೃತವಾಗಿ ಘೋಷಿಸಲಾಯಿತು. ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಅವರು ಸೆಪ್ಟೆಂಬರ್ 11ರ ದಿನಾಂಕವನ್ನು ಪ್ರಕಟಿಸಿದರು. ನಟರಾದ ಪೃಥ್ವಿ ಅಂಬರ್, ಶಾನ್ವಿ ಶ್ರೀವಾಸ್ತವ್ ಹಾಗೂ ನಿರೂಪ್ ಭಂಡಾರಿ ಸೇರಿದಂತೆ ಚಿತ್ರತಂಡದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡಿಗರು ನೆಲೆಸಿರುವ ವಿಶ್ವದ ಹಲವು ಭಾಗಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಕರ್ನಾಟಕದಲ್ಲಿ ಕೆವಿಎನ್ ಸಂಸ್ಥೆ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ‘ಅಮೇರಿಕಾ ಅಮೇರಿಕಾ 2’ ನಿರ್ಮಾಣಗೊಂಡಿದೆ.
