Cinema News
‘ಶ್ರೀಕೃಷ್ಣ’ ಚಿತ್ರದ ‘ಉಧೋ ಉಧೋ ಯಲ್ಲವ್ವ…’ ಲಿರಿಕಲ್ ಹಾಡು ಬಿಡುಗಡೆ

ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಶಂಕರ್ ರಾಜ ವರ್ಮ ಅವರ ಹೊಸ ಚಿತ್ರ ‘ಶ್ರೀಕೃಷ್ಣ’ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮೇ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಆರಂಭವಾಗಿದ್ದು, ಮೊದಲ ಲಿರಿಕಲ್ ಹಾಡು ‘ಉಧೋ ಉಧೋ ಯಲ್ಲವ್ವ…’ ಬಿಡುಗಡೆಗೊಂಡಿದೆ.
ಎಂ.ಎಸ್. ತ್ಯಾಗರಾಜ್ ಸಾಹಿತ್ಯ ಬರೆದು, ಸಂಗೀತ ನೀಡುವುದರ ಜೊತೆಗೆ ಹಾಡಿಗೆ ಧ್ವನಿಯಾಗಿದ್ದು, ಸರಯೂ ಸಹ ಹಾಡಿನಲ್ಲಿ ಕೈಜೋಡಿಸಿದ್ದಾರೆ. ಈ ಹಾಡು ಯೂಟ್ಯೂಬ್‌ನ ಸಿರಿ ಮ್ಯೂಸಿಕ್ ಚಾನಲ್‌ನಲ್ಲಿ ಬಿಡುಗಡೆಗೊಂಡಿದೆ. ಶುಕ್ರವಾರ ಉತ್ಸವ್ ಲೆಗೆಸಿಯಲ್ಲಿ ನಡೆದ ಸಮಾರಂಭದಲ್ಲಿ ಚಿತ್ರತಂಡ ಹಾಡನ್ನು ಬಿಡುಗಡೆ ಮಾಡಿದೆ.
ಬೃಹಸ್ಪತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಂಕರ್ ರಾಜ ವರ್ಮ ಮತ್ತು ಅಜಯ್ ಕುಮಾರ್ ಪಿ.ಎಂ. ಸಂಯುಕ್ತವಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಶಿವಲಿಂಗಯ್ಯ ಸಿ.ಎಂ, ಉಲ್ಲಾಸ್ ಕೆ.ಸಿ.ಎಸ್, ಚಾಣುಕ್ಯ ಆರ್, ‘ನೆನಪಿರಲಿ’ ಮೋಹನ್ ಮತ್ತು ಲತಾ ಮಂಜುನಾಥ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

ಚಿತ್ರದ ಬಗ್ಗೆ ಮಾತನಾಡಿದ ಶಂಕರ್ ರಾಜ ವರ್ಮ, “ನಾನು ನಿರ್ದೇಶಕನಾಗುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ. ನನ್ನ ಕುಟುಂಬ ಮತ್ತು ಸ್ನೇಹಿತರ ಬೆಂಬಲದಿಂದಲೇ ಈ ಹಂತ ತಲುಪಿದ್ದೇನೆ. ‘ಬ್ರಹ್ಮರಾಕ್ಷಸ’ ಚಿತ್ರದ ನಂತರ ‘ಶ್ರೀಕೃಷ್ಣ’ ಎಂಬ ಶೀರ್ಷಿಕೆ ಇಟ್ಟು ಸಿನಿಮಾ ಮಾಡಬೇಕೆಂಬ ಆಲೋಚನೆ ಬಂದಿದೆ. ಈ ಚಿತ್ರದ ನಿಜವಾದ ಶಕ್ತಿ ನನ್ನ ತಂಡ,” ಎಂದು ಹೇಳಿದರು. ಚಿತ್ರದ ಟ್ರೇಲರ್ ಮಾರ್ಚ್ 30ರಂದು ಬಿಡುಗಡೆಯಾಗಲಿದೆ ಎಂದೂ ತಿಳಿಸಿದರು.
ಚಿತ್ರದ ಕಥೆ ಮೂರು ಅನಾಥರ ಬದುಕಿನ ಸುತ್ತ ಸಾಗುತ್ತದೆ. ನಾಯಕಿಯೂ ಅನಾಥೆಯೇ. ಒಟ್ಟಾಗಿ ಬದುಕುತ್ತಿರುವ ಈ ಮೂವರ ಜೀವನದಲ್ಲಿ ನಡೆಯುವ ಒಂದು ಘಟನೆ, ಅವರನ್ನು ಜೈಲಿಗೆ ತಳ್ಳುತ್ತದೆ. ಅಲ್ಲಿಂದ ಹೊರಬಂದ ನಂತರ ಅವರ ಬದುಕು ಯಾವ ದಿಕ್ಕಿಗೆ ಸಾಗುತ್ತದೆ ಎಂಬುದೇ ಚಿತ್ರದ ಮೂಲ ಕಥಾವಸ್ತು.

ನಾಯಕಿ ಚೈತ್ರಾ ತೋಟದ್ ಮಾತನಾಡಿ, “ನಾನು ಅನಾಥೆಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಆಕೆಯ ಬದುಕಿನ ಹೋರಾಟ ಮತ್ತು ನಾಯಕನೊಂದಿಗೆ ಅವಳ ಬದುಕು ಹೇಗೆ ಬದಲಾಗುತ್ತದೆ ಎಂಬುದನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ನಿರ್ದೇಶಕರು ಯಾವುದೇ ರಾಜಿ ಮಾಡಿಕೊಳ್ಳದೇ ಸಿನಿಮಾ ಮಾಡಿದ್ದಾರೆ,” ಎಂದರು.
ನಿರ್ಮಾಪಕ ಅಜಯ್ ಕುಮಾರ್, “ಇದು ಸ್ನೇಹಿತರು ಸೇರಿ ಸ್ನೇಹಕ್ಕಾಗಿ ಮಾಡುತ್ತಿರುವ ಸಿನಿಮಾ. ನಮ್ಮ ತಂಡದ ಎಲ್ಲರಿಗೂ ಈ ಚಿತ್ರದಿಂದ ಒಳ್ಳೆಯದಾಗಲಿ,” ಎಂದು ಆಶಿಸಿದರು.
ಈ ಚಿತ್ರದಲ್ಲಿ ಶಂಕರ್ ರಾಜ ವರ್ಮ, ಚೈತ್ರಾ ತೋಟದ್ ಜೊತೆ ಪ್ರದೀಪ್ ಪೂಜಾರಿ, ಭುವನ್ ಗೌಡ, ಸ್ನೇಹಾ, ಈಶ್ವರ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಎಂ.ಎಸ್. ತ್ಯಾಗರಾಜ್ ಸಂಗೀತ ಹಾಗೂ ಸಾಹಿತ್ಯ, ಅನಿರುದ್ಧ್ ಛಾಯಾಗ್ರಹಣ ಮತ್ತು ಕೀರ್ತಿರಾಜು ಸಂಕಲನ ಚಿತ್ರಕ್ಕೆ ಕೈಜೋಡಿಸಿದೆ.
