Cinema News
ಹಣದ ಹಂಬಲದ ಕಥೆ ಹೇಳುವ “ಕಿಲಾಡಿ ಮೇಘ”

ಸುಲೋಚನಾ ಪ್ರೊಡಕ್ಷನ್ಸ್‌ನಡಿ ಸುಲೋಚನಾ ಸುಕುಮಾರ್ ನಿರ್ಮಿಸಿರುವ “ಕಿಲಾಡಿ ಮೇಘ” ಚಿತ್ರದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಡಬ್ಬಿಂಗ್ ಕಲಾವಿದನಾಗಿ ಗುರುತಿಸಿಕೊಂಡಿರುವ ಬಿ.ಟಿ. ಮಂಜುನಾಥ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಸಿನಿಮಾ, ಹಣದ ಹಿಂದೆ ಹೋಗುವ ಮಾನವನಿಗೆ ಎದುರಾಗುವ ಪರಿಣಾಮಗಳನ್ನು ಹಾರರ್ ಹಿನ್ನೆಲೆಯಲ್ಲೇ ಹೇಳುತ್ತದೆ.

ಡಿಕೆಡಿ ಹಾಗೂ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹಾಲಕ್ಷ್ಮಿ ನಾಯಕಿ ಮೇಘಳಾಗಿ ಕಾಣಿಸಿಕೊಂಡಿದ್ದು, ಹಿರಿಯ ನಟ ಶಂಕರ್ ಅಶ್ವಥ್ ದೈವಾರಾಧಕನ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ವರ್ಷಗಳಿಂದ ನೃತ್ಯ ಕಲಾವಿದನಾಗಿಯೂ, ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸಿರುವ ಸುಕುಮಾರ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ.

ನಿರ್ದೇಶಕ ಮಂಜುನಾಥ್ ಮಾತನಾಡಿ, ಇದು 13 ವರ್ಷದ ಹುಡುಗಿಯ ಸುತ್ತ ನಡೆಯುವ ಕಥೆಯಾಗಿದೆ ಎಂದರು. ಮೊದಲು ರಾಜೇಶ್ ರಾಜ್ ಆರಂಭಿಸಿದ್ದ ಈ ಚಿತ್ರವನ್ನು ಬಳಿಕ ತಾವು ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ತಂದಿರುವುದಾಗಿ ತಿಳಿಸಿದರು. ನಿರ್ಮಾಪಕ ಸುಕುಮಾರ್ ಹಣದ ಹಿಂದೆ ಹೋಗಬಾರದು ಎನ್ನುವುದೇ ಚಿತ್ರದ ಸಾರ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಹಾಗೂ ಹಾಸ್ಯನಟ ಮಿತ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು. ಕೆ.ಎಂ. ಇಂದ್ರ ಸಂಗೀತ ನೀಡಿದ್ದಾರೆ.
