Cinema News
ಟಾಕ್ಸಿಕ್ ಜೊತೆ ‘ಜಾಕಿ 42’ ಥಿಯೇಟರಿಕಲ್ ಟ್ರೈಲರ್; ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ!

‘ಟಾಕ್ಸಿಕ್’.. ‘ಟಾಕ್ಸಿಕ್’.. ಎಲ್ಲೆಲ್ಲೂ ಇದೀಗ ‘ಟಾಕ್ಸಿಕ್’ ಹವಾ. ನಾಳೆಯಿಂದ ವಿಶ್ವದಾದ್ಯಂತ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಇದರ ಜೊತೆಯಲ್ಲೇ ಕರ್ನಾಟಕದಾದ್ಯಂತ ಕಿರಣ್ ರಾಜ್ ನಟನೆಯ ‘ಜಾಕಿ 42’ ಚಿತ್ರದ ಥಿಯೇಟರಿಕಲ್ ಟ್ರೈಲರ್ ಪ್ರದರ್ಶನಗೊಳ್ಳಲಿದೆ. ‘ಟಾಕ್ಸಿಕ್’ ನೋಡಲು ಚಿತ್ರಮಂದಿರಗಳಿಗೆ ಆಗಮಿಸುವ ಕನ್ನಡ ಪ್ರೇಕ್ಷಕರಿಗೆ ‘ಜಾಕಿ 42’ ತಂಡ ಈ ಮೂಲಕ ವಿಶೇಷ ಸರ್ಪ್ರೈಸ್ ನೀಡುತ್ತಿದೆ.
ಗೋಲ್ಡನ್ ಗೇಟ್ ಸ್ಟುಡಿಯೋ ಬ್ಯಾನರ್‌ನಲ್ಲಿ ಭಾರತಿ ಸತ್ಯನಾರಾಯಣ ನಿರ್ಮಿಸಿರುವ ‘ಜಾಕಿ 42’ ಚಿತ್ರಕ್ಕೆ ಗುರುತೇಜ್ ಶೆಟ್ಟಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಕುದುರೆ ರೇಸ್ ಹಿನ್ನೆಲೆಯ ವಿಭಿನ್ನ ಕಥೆಯನ್ನು ಒಳಗೊಂಡಿರುವ ಈ ಸಿನಿಮಾ, ವಿಶಿಷ್ಟ ಸ್ಕ್ರೀನ್‌ಪ್ಲೇ ಹಾಗೂ ಗುಣಮಟ್ಟದ ಮೇಕಿಂಗ್‌ನಿಂದ ಗಮನ ಸೆಳೆಯಲಿದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ. ‘ಟಾಕ್ಸಿಕ್’ ನೋಡಲು ಬರುವ ಪ್ರೇಕ್ಷಕರಲ್ಲಿ ‘ಜಾಕಿ 42’ ಬಗ್ಗೆ ಕುತೂಹಲ ಮೂಡಿಸುವ ಉದ್ದೇಶದಿಂದಲೇ ಥಿಯೇಟರ್‌ಗಳಲ್ಲಿ ಟ್ರೈಲರ್ ಪ್ರದರ್ಶಿಸಲಾಗುತ್ತಿದೆ.

ಚಿತ್ರದಲ್ಲಿ ಕಿರಣ್ ರಾಜ್, ಹೃತಿಕ್ ಶ್ರೀನಿವಾಸ್, ಯುಕ್ತಾ, ದೀಪಕ್ ರೈ, ರಾಜೇಂದ್ರ ಕಾರಂತ್, ಚೇತನ್ ರೈ ಮಣಿ, ಮಧುಸೂಧನ್ ರಾವ್, ಗಿರೀಶ್ ಹೆಗಡೆ, ಅರುಣ್ ಆಚಾರ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಇದೀಗ ಥಿಯೇಟರಿಕಲ್ ಟ್ರೈಲರ್ ಮೂಲಕ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವೇಗ ನೀಡಲು ಚಿತ್ರತಂಡ ಮುಂದಾಗಿದೆ.

ಈಗಾಗಲೇ ಮತ್ತೊಂದು ಹಾಡಿನ ಬಿಡುಗಡೆಗೆ ಸಿದ್ಧತೆ ನಡೆಸುತ್ತಿರುವ ‘ಜಾಕಿ 42’ ತಂಡ, ಚಿತ್ರದ ರಿಲೀಸ್ ಡೇಟ್ ಅನ್ನೂ ಶೀಘ್ರದಲ್ಲೇ ಘೋಷಿಸುವ ಯೋಜನೆಯಲ್ಲಿದೆ. ‘ಟಾಕ್ಸಿಕ್’ ಸಿನಿಮಾ ವೀಕ್ಷಿಸಲು ಚಿತ್ರಮಂದಿರಗಳಿಗೆ ಬರುವ ಕನ್ನಡ ಪ್ರೇಕ್ಷಕರಿಗೆ ‘ಜಾಕಿ 42’ ಚಿತ್ರದ ಟ್ರೈಲರ್ ಹೊಸ ಕುತೂಹಲ ಮೂಡಿಸುವ ನಿರೀಕ್ಷೆಯಿದೆ. ಹಾಗಾಗಿ ‘ಟಾಕ್ಸಿಕ್’ ಹವಾ ನಡುವೆ ‘ಜಾಕಿ 42’ ಥಿಯೇಟರಿಕಲ್ ಟ್ರೈಲರ್ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
