Cinema News
ಉತ್ತರ ಕರ್ನಾಟಕದ ಸೊಗಡಿನ ‘ಹುಲಿಬೀರ’; ‘ಬಂದಾನ ನೋಡ’ ಹಾಡು ಬಿಡುಗಡೆ

‘ಮದರಂಗಿ’, ‘ರಂಗ್ ಬಿರಂಗಿ’ ಚಿತ್ರಗಳ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮದರಂಗಿ ಮಲ್ಲಿಕಾರ್ಜುನ ಇದೀಗ ‘ಹುಲಿಬೀರ’ ಚಿತ್ರದೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಉತ್ತರ ಕರ್ನಾಟಕದ ಸೊಗಡು, ಅಲ್ಲಿನ ಭಾಷೆ ಮತ್ತು ಬದುಕಿನ ಶೈಲಿಯನ್ನು ಪ್ರಧಾನವಾಗಿಟ್ಟುಕೊಂಡು ಮೂಡಿಬಂದಿರುವ ಈ ಚಿತ್ರದಲ್ಲಿ ‘ಯರ್ರಾಬಿರ್ರಿ’ ಖ್ಯಾತಿಯ ಅಂಜನ್ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ, ವನು ಪಾಟೀಲ್ ಹಾಗೂ ಅಂಜಲಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ಸಾಯಿ ಸ್ಟಾರ್ ಸಿನಿಮಾಸ್ ಬ್ಯಾನರ್ನಲ್ಲಿ ದಾವಲ್ ಸಾಹೇಬ ಹುಣಶೀಮರದ, ಅಶೋಕ್ ಎನ್. (ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಚಿತ್ರವನ್ನು ನಿರ್ಮಿಸಿದ್ದಾರೆ.
ಈಗಾಗಲೇ ‘ಹುಟ್ಟಿಬಂದೆ ಹುಲಿಬೀರನಾಗಿ’ ಹಾಗೂ ಉತ್ತರ ಕರ್ನಾಟಕದ ಜಾನಪದ ಸೊಗಡಿನ ‘ಜಿಗ್ರಿ ದೋಸ್ತ ಜಿಗ್ರಿ ದೋಸ್ತ’ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಇದೀಗ ಚಿತ್ರದ ಮತ್ತೊಂದು ಹಾಡು ‘ಬಂದಾನ ನೋಡ’ ಬಿಡುಗಡೆಯಾಗಿದೆ. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಹಾಗೂ ಗುರುರಾಜ್ ಅವರು ಈ ಹಾಡಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ವಿ.ಮನೋಹರ್, ವೀರ ಸಮರ್ಥ್ ಹಾಡನ್ನು ಅತ್ಯುತ್ತಮವಾಗಿ ಸಂಯೋಜಿಸಿದ್ದು, ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ಅರ್ಥಪೂರ್ಣ ಸಾಹಿತ್ಯ ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗಾಯಕಿ ಪ್ರಜ್ಞಾ ಮರಾಠೆ ಹಾಡನ್ನು ಆಕರ್ಷಕವಾಗಿ ಹಾಡಿದ್ದಾರೆ ಎಂದು ಪ್ರಶಂಸಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ಮಾತನಾಡಿ, ‘ಹುಲಿಬೀರ’ ತಮ್ಮ ನಿರ್ದೇಶನದ ಐದನೇ ಚಿತ್ರ ಎಂದರು. ಹಳ್ಳಿಗಳಲ್ಲಿ ಧೈರ್ಯಶಾಲಿ ಯುವಕರನ್ನು ಪ್ರೀತಿಯಿಂದ ‘ಹುಲಿಬೀರ’ ಎಂದು ಕರೆಯುವ ಹಿನ್ನೆಲೆಯಲ್ಲೇ ಚಿತ್ರದ ನಾಯಕನ ಪಾತ್ರವನ್ನು ರೂಪಿಸಲಾಗಿದೆ. ಗ್ರಾಮದ ಯಾವುದೇ ಸಮಸ್ಯೆ ಎದುರಾದರೂ ಮುಂದೆ ನಿಂತು ಪರಿಹರಿಸುವ ಬೀರನ ಸುತ್ತ ಕಥೆ ಸಾಗುತ್ತದೆ. ಹಳ್ಳಿಯ ದೊಡ್ಡ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ ಎಂಬುದೇ ಚಿತ್ರದ ಪ್ರಮುಖ ಕಥಾವಸ್ತು. ಕಾಮಿಡಿ, ಸೆಂಟಿಮೆಂಟ್ ಮತ್ತು ಮನರಂಜನೆಯೊಂದಿಗೆ ಸಮಾಜಕ್ಕೆ ಉತ್ತಮ ಸಂದೇಶವನ್ನೂ ಚಿತ್ರ ನೀಡಲಿದೆ. ಇನ್ನೂ 15 ದಿನಗಳಲ್ಲಿ ಟ್ರೈಲರ್ ಬಿಡುಗಡೆ ಮಾಡಿ, ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 2ರಂದು ಸಿನಿಮಾ ತೆರೆಗೆ ತರಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.

ನಾಯಕ ಅಂಜನ್, ಈಗಾಗಲೇ ಬಿಡುಗಡೆಯಾಗಿರುವ ಎರಡೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ‘ಹುಟ್ಟಿಬಂದೆ’ ಹಾಡು ಹಿರಿಯರಿಗೂ ಇಷ್ಟವಾಗಿದ್ದು, ಇದೀಗ ‘ಬಂದಾನ ನೋಡ’ ಹಾಡು ಬಿಡುಗಡೆಯಾಗಿದೆ ಎಂದರು. ಸಂಗೀತ ನಿರ್ದೇಶಕ ವೀರ ಸಮರ್ಥ್, ‘ಹುಲಿಬೀರ’ ತಮ್ಮ ಸಂಗೀತ ಪಯಣದ ಪ್ರಮುಖ ಚಿತ್ರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಿನಿಮಾ ನೋಡಿದ ಬಳಿಕ ಭಾವುಕರಾಗಿದ್ದಾಗಿ ಹೇಳಿದ ಅವರು, ಚಿತ್ರದಲ್ಲಿ ಮಣ್ಣಿನ ಸೊಗಡಿನ ಹಾಡುಗಳಿದ್ದು, ಈ ಹಾಡು ಜನಪದ ಶೈಲಿಯ ರೊಮ್ಯಾಂಟಿಕ್ ಹಾಡಾಗಿದೆ ಎಂದು ವಿವರಿಸಿದರು. ನಿರ್ಮಾಪಕರಾದ ದಾವಲ್ ಸಾಹೇಬ ಹುಣಶೀಮಠದ, ಎ.ಅಶೋಕ್ ಹಾಗೂ ಸುಜಾತ ಗಿರೀಶ್ ಕೂಡ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ಕೋರಿದರು. ಚಿತ್ರಕ್ಕೆ ಧರ್ಮವಿಶ್ ಹಿನ್ನೆಲೆ ಸಂಗೀತ ನೀಡಿದ್ದು, ಸನಾತನ ಕ್ಯಾಮೆರಾ ವರ್ಕ್ ನಿರ್ವಹಿಸಿದ್ದಾರೆ.
