News
ಪೂಜಾಭಾರ್ಗವಿ ಅತಿ ಚಿಕ್ಕವಯಸಿನ ನಿರ್ದೇಶಕಿ “ಹೇ..ಕೃಷ್ಣ” ಚಿತ್ರದ ನಿರ್ದೇಶಕಿಗೆ ೨೨ ವರ್ಷ, ಕಥೆಗಾರ್ತಿಗೆ ೧೫ ವರ್ಷ

ಚಿತ್ರರಂಗದ ಇತಿಹಾಸದಲ್ಲಿ ಮಹಿಳಾ ನಿರ್ದೇಶಕಿಯರು ತೀರ ಕಮ್ಮಿ. ಈಗ ಕಿರುತೆರೆ ನಿರ್ದೇಶಕ ಬುಕ್ಕಾಪಟ್ಟಣ ವಾಸು ಅವರ ಪುತ್ರಿ ಪೂಜಾಭಾರ್ಗವಿ ತನ್ನ ಅತ್ಯಂತ ಚಿಕ್ಕ ವಯಸಿನಲ್ಲೇ ನಿರ್ದೇಶಕಿಯಾಗುವ ಮೂಲಕ ದಾಖಲೆ ಬರೆಯಹೊರಟಿದ್ದಾರೆ. ಹೌದು, ಹೇ…ಕೃಷ್ಣ ಎಂಬ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರಕ್ಕೆ ೨೨ ವರ್ಷ ವಯಸಿನ ಪೂಜಾಭಾರ್ಗವಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ವಿಶೇಷ ಎಂದರೆ ಈ ಚಿತ್ರವನ್ನು ನಿರ್ಮಿಸುತ್ತಿರುವವರು, ಚಿತ್ರದ ಕಥೆ ಬರೆದವರು, ಸಂಭಾಷಣೆ ಬರೆದವರು ಕೂಡ ಮಹಿಳೆಯೇ ಆಗಿದ್ದಾರೆ. ನಾಲ್ವರು ಮಹಿಳೆಯರು ಈ ಚಿತ್ರದ ಪ್ರಮುಖ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಸದ್ಯದಲ್ಲೇ ಚಿತ್ರೀಕರಣ ಆರಂಭಿಸಲಿರುವ ಹೇ.. ಕೃಷ್ಣ ಚಿತ್ರದ ಕುರಿತಂತೆ ಪತ್ರಿಕಾಗೋಷ್ಟಿಯಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಶ್ರೀವಿಷ್ಣು ಫಿಲಂಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಗಾಯತ್ರಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ಪುತ್ರಿ ಕು.ಯುಕ್ತ ಈ ಚಿತ್ರದ ಕಥೆ ಬರೆದಿದ್ದು, ಶ್ರೀಮತಿ ರಾಜೇಶ್ವರಿ ವಾಸು ಸಂಭಾಷಣೆಗಳನ್ನು ರಚಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕಿ ಶ್ರೀಮತಿ ಗಾಯತ್ರಿ, ನಮ್ಮ ಚಿತ್ರದಲ್ಲಿ ಮಹಿಳಾ ಪ್ರತಿಭೆಗಳನ್ನು ಹೊರತರಬೇಕೆಂದು ಹುಡುಕಾಟದಲ್ಲಿದ್ದಾಗ ಕಂಡದ್ದೇ ಪೂಜಾಭಾರ್ಗವಿ, ಆಕೆಯ ಪ್ರತಿಭೆ, ನಮೃತೆ ನನಗೆ ತುಂಬಾ ಇಷ್ಟವಾಯಿತು. ಅಲ್ಲದೆ ಆಕೆ ನಿರ್ದೇಶನದ ತರಬೇತಿ ಕೂಡ ಮಾಡಿಕೊಂಡಿದ್ದಾಳೆ. ಈಗಾಗಲೇ ಮಾಸ್ಟರ್ ಕಿಶನ್ ೯ನೇ ವಯಸಿನಲ್ಲೇ ನಿರ್ದೇಶನ ಮಾಡಿದ್ದಾರೆ, ಆದರೆ ಮಹಿಳೆಯರಲ್ಲಿ ೨೬ ವರ್ಷದ ಯುವತಿಯ ದಾಖಲೆಯಿತ್ತು. ಈಗ ೨೨ ವಯಸಿನ ಪೂಜಾ ಅತ್ಯಂತ ಚಿಕ್ಕವಯಸಿನ ಮಹಿಳಾ ನಿರ್ದೇಶಕಿಯಾಗಿ ಹೊರಹೊಮ್ಮುತ್ತಿದ್ದಾರೆ. ಈ ಕಥೆಯನ್ನು ನನ್ನ ಮಗಳು ಯುಕ್ತಾ ಬರೆದಿದ್ದು, ಆಕೆ ಕೂಡ ಚಿಕ್ಕ ವಯಸಿನವಳೇ. ಸಸ್ಪೆನ್ಸ್, ಥ್ರಿಲ್ಲರ್ ಕಥೆಯ ಜೊತೆ ಒಂದೊಳ್ಳೇ ಮೆಸೇಜ್ ಕೂಡ ಈ ಚಿತ್ರದಲ್ಲಿರುತ್ತದೆ ಎಂದು ಹೇಳಿದರು.
ನಿರ್ದೇಶಕಿಯಾಗುತ್ತಿರುವ ಪೂಜಾಭಾರ್ಗವಿ ಮಾತನಾಡಿ, ನಾನು ಸೆಂಚುರಿ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಡೈರೆಕ್ಷನ್ ಕೋರ್ಸ್ ಮಾಡಿದೆ. ಹಲವಾರು ಡಾಕ್ಯುಮೆಂಟರಿ ಫಿಲಂ ಅಲ್ಲದೆ ಕಿರುಚಿತ್ರಗಳನ್ನೂ ನಿರ್ದೇಶಿಸಿದ್ದೇನೆ. ಇದೊಂದು ಮಿಸ್ಟಿ ಥ್ರಿಲ್ಲರ್ ಚಿತ್ರ. ಕಲಾವಿದರನ್ನೆಲ್ಲ ಸೆಟಪ್ ಮಾಡಿಕೊಂಡು ಮುಂದಿನ ತಿಂಗಳು ಶೂಟಿಂಗ್ ಪ್ರಾರಂಭಿಸುತ್ತಿದ್ದೇವೆ. ನನಗೆ ಚಿಕ್ಕವಳಿದ್ದಾಗಲೇ ಆಕ್ಟಿಂಗ್ ಬಗ್ಗೆ ಕುತೂಹಲ ಇತ್ತು. ಆನಂತರದಲ್ಲಿ ಡೈರೆಕ್ಷನ್ ಮೇಲೆ ಆಸಕ್ತಿ ಬೆಳೆದು ಅದನ್ನೇ ಕಲಿತೆ. ಮರ್ಡರ್ ಇನ್‌ವೆಸ್ಟಿಗೇಶನ್ ಅಲ್ಲದೆ ಕಾಮಿಡಿ ಹೀಗೆ ಎರಡು ಟ್ರಾಕ್‌ನಲ್ಲಿ ಹೇ..ಕೃಷ್ಣ ಚಿತ್ರದ ಕಥೆ ಸಾಗುತ್ತದೆ. ಇಬ್ಬರು ನಾಯಕರು, ಇಬ್ಬರು ನಾಯಕಿಯರು ಚಿತ್ರದಲ್ಲಿರುತ್ತಾರೆ. ಕುಂದಾಪುರ, ಮೈಸೂರು, ತೀರ್ಥಳ್ಳಿ ಸುತ್ತಮುತ್ತ ಶೂಟಿಂಗ್ ನಡೆಸುವ ಪ್ಲಾನಿದೆ ಎಂದು ಹೇಳಿದರು. ನಂತರ ಬುಕ್ಕಾಪಟ್ಟಣ ವಾಸು ಮಾತನಾಡಿ ಪೂಜಾ ಈಗಾಗಲೇ ಬಣ್ಣ ಎಂಬ ಸೀರಿಯಲ್‌ನಲ್ಲಿ ಅಭಿನಯಿಸಿದ್ದಳು. ಈ ಚಿತ್ರವು ಆ ಕೃಷ್ಣ ಪರಮಾತ್ಮನೇ ನನ್ನ ಮಗಳಿಗೆ ನೀಡಿದ ಅವಕಾಶ, ಆಕೆ ಚೆನ್ನಾಗಿ ನಿರ್ದೇಶನ ಮಾಡುತ್ತಾಳೆಂಬ ನಂಬಿಕೆಯಿದೆ. ಈ ಕಥೆ ಬರೆದ ಹುಡುಗಿಯೂ ಚಿಕ್ಕವಳೇ. ಖಂಡಿತ ಇದೊಂದು ಒಳ್ಳೆಯ ಚಿತ್ರವಾಗುತ್ತೆಂಬ ನಂಬಿಕೆಯಿದೆ ಎಂದರು. ಚಿತ್ರಕಥೆ ಬರೆದ ಸನೂಪ್‌ಸಾಜನ್ ಮಾತನಾಡುತ್ತ ಚಿತ್ರದ ಟೈಟಲ್‌ಗೂ ಸಿನಿಮಾಗೂ ಒಂದು ಸಣ್ಣ ಲಿಂಕ್ ಇದೆ. ಅದನ್ನುಬಿಟ್ಟರೆ ಇಡೀ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಎಂಟರ್‌ಟೈನಿಂಗ್ ಆಗಿರುತ್ತದೆ ಎಂದರು. ಚಿತ್ರದ ನಾಯಕನಾಗಿ ನಟಿಸುತ್ತಿರುವ ಮಯೂರ್, ಛಾಯಾಗ್ರಾಹಕ ರಾಜಶೇಖರ್ ಚಿತ್ರದ ಕುರಿತಂತೆ ಮಾತನಾಡಿದರು.
