Cinema News
ಫ್ಯಾಂಟಸಿ ಥ್ರಿಲ್ಲರ್ ‘ಮಿಸ್ಟರ್ ಲಕ್ಕಿ’ ಟೋಪಿ ಸಾಂಗ್ ಹಾಗೂ ಟೀಸರ್ ಬಿಡುಗಡೆ

ಹೊಸತನದ ಕಥೆಗಳಿಗೆ ಕನ್ನಡ ಪ್ರೇಕ್ಷಕರು ಸದಾ ಪ್ರೋತ್ಸಾಹ ನೀಡುತ್ತಿದ್ದು, ಇದೇ ಸಾಲಿಗೆ ಸೇರ್ಪಡೆಯಾಗಲು ‘ಮಿಸ್ಟರ್ ಲಕ್ಕಿ’ ಸಜ್ಜಾಗಿದೆ. ನಿರ್ದೇಶಕ ಹರ್ಷಿತ್ ರಂಗಸ್ವಾಮಿ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರ ಸೈಂಟಿಫಿಕ್ ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುವ ‘ಟೋಪಿ’ಯನ್ನೇ ಆಧರಿಸಿ ಹಾಡೊಂದನ್ನು ರೂಪಿಸಲಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್ ಜೊತೆಗೆ ಈ ಹಾಡನ್ನೂ ಬಿಡುಗಡೆ ಮಾಡಲಾಯಿತು. ಹೆಚ್.ಆರ್. ವಿಜನ್ಸ್ ಬ್ಯಾನರ್ ಅಡಿಯಲ್ಲಿ ಚಂದನ್ ರಂಗಸ್ವಾಮಿ, ವಸಂತ್, ನಾರಾಯಣ ಸ್ವಾಮಿ, ಅನ್ನಪೂರ್ಣ ಹಾಗೂ ಪವನ್ ಶೆಟ್ಟಿ ಜಂಟಿಯಾಗಿ ಚಿತ್ರ ನಿರ್ಮಿಸಿದ್ದಾರೆ. ರಾಮ್ ತೇಜ್ ನಾಯಕನಾಗಿ, ರಿತಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದು, ಐಶ್ವರ್ಯ ನಾಯಕನ ಸಹೋದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಹರ್ಷಿತ್ ರಂಗಸ್ವಾಮಿ ಮಾತನಾಡಿ, ಈ ಹಿಂದೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ತಾವು ಸಿನಿಮಾ ನಿರ್ದೇಶನದ ಕನಸಿಗಾಗಿ ವಿರಾಮ ಪಡೆದು, ಸ್ನೇಹಿತರೊಂದಿಗೆ ಸೇರಿ ಈ ಚಿತ್ರವನ್ನು ರೂಪಿಸಿರುವುದಾಗಿ ತಿಳಿಸಿದರು. ಇದಕ್ಕೂ ಮೊದಲು ‘ಗುಣ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದಾಗಿ ಹೇಳಿದರು. ‘ಲಕ್ಕಿ’ ಎಂಬುದು ಚಿತ್ರದ ನಾಯಕ ಲಕ್ಷ್ಮಣನ ಅಡ್ಡಹೆಸರು. ಹೆಸರಿನಲ್ಲಿ ಅದೃಷ್ಟವಿದ್ದರೂ ಬದುಕಿನಲ್ಲಿ ಅದೃಷ್ಟ ಕೈಹಿಡಿಯದ ಆತನಿಗೆ ಮ್ಯಾಜಿಕಲ್ ಟೋಪಿ ಸಿಕ್ಕ ಬಳಿಕ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳೇ ಚಿತ್ರದ ಕುತೂಹಲಕಾರಿ ಅಂಶಗಳಾಗಿವೆ. ಚಿತ್ರದಲ್ಲಿ ದರ್ಶನ್ ಅಭಿಮಾನಿಗಳಿಗಾಗಿ ಒಂದು ಕಾಮಿಡಿ ದೃಶ್ಯವನ್ನೂ ಸೇರಿಸಿದ್ದು, ಉಳಿದಂತೆ ಕಥೆ ಥ್ರಿಲ್ಲರ್ ಅಂಶಗಳೊಂದಿಗೆ ಸಾಗಲಿದೆ ಎಂದರು. ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲಿದ್ದು, ಅಕ್ಟೋಬರ್ 30ರಂದು ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ತಿಳಿಸಿ ಪ್ರೇಕ್ಷಕರ ಬೆಂಬಲ ಕೋರಿದರು.

ನಿರ್ಮಾಪಕರಲ್ಲೊಬ್ಬರಾದ ವಸಂತ್, ನಿರ್ದೇಶಕ ಹರ್ಷಿತ್ ತಮ್ಮ ಊರಿನವರಾಗಿದ್ದು, ಅವರ ಕಿರುಚಿತ್ರವನ್ನು ನೋಡಿ ಮೆಚ್ಚಿಕೊಂಡ ನಂತರ ಈ ಸಿನಿಮಾದ ನಿರ್ಮಾಣಕ್ಕೆ ಕೈಜೋಡಿಸಿರುವುದಾಗಿ ಹೇಳಿದರು. ನಾಯಕ ರಾಮ್ ತೇಜ್ ಮಾತನಾಡಿ, ಈ ಹಿಂದೆ ರಂಗಸಾರೋಟು ತಂಡದೊಂದಿಗೆ ಕೆಲಸ ಮಾಡಿದ್ದು, ಕೆಲವು ಧಾರಾವಾಹಿಗಳಲ್ಲಿಯೂ ನಟಿಸಿದ್ದಾಗಿ ತಿಳಿಸಿದರು. ಬಳಿಕ ಹರ್ಷಿತ್ ಪರಿಚಯವಾಗಿ ಈ ಚಿತ್ರದಲ್ಲಿ ಅವಕಾಶ ದೊರೆಯಿತು ಎಂದರು. ಆರಂಭದಲ್ಲಿ ಚಿತ್ರಕ್ಕೆ ‘ಕ್ಯಾಪ್ ಆಫ್ ಲಕ್’ ಎಂಬ ಶೀರ್ಷಿಕೆ ಇಡಲಾಗಿತ್ತು. ರಾಮ್ ತೇಜ್, ಐಶ್ವರ್ಯ ಹಾಗೂ ರಿತಿ ಶೆಟ್ಟಿ ಅವರ ಪಾತ್ರಗಳ ಸುತ್ತ ಕಥೆ ಸಾಗಲಿದ್ದು, ಟೋಪಿ ಕೂಡ ಕಥೆಯ ಪ್ರಮುಖ ಭಾಗವಾಗಿದೆ. ನಟ ಶ್ರೀನಿಧಿ ಬೆಂಗಳೂರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ನಾಯಕಿ ರಿತಿ ಶೆಟ್ಟಿ, ತಾನು ನಾಯಕನ ಬದುಕಿಗೆ ಅದೃಷ್ಟ ತರುವ ಹುಡುಗಿಯ ಪಾತ್ರ ನಿರ್ವಹಿಸಿರುವುದಾಗಿ ಹೇಳಿದರೆ, ಐಶ್ವರ್ಯ ನಾಯಕನ ತಂಗಿಯಾಗಿ ನಟಿಸಿದ್ದು, ತೆರೆಮೇಲಿನ ತಮ್ಮಿಬ್ಬರ ಬಾಂಧವ್ಯ ಚೆನ್ನಾಗಿ ಮೂಡಿಬಂದಿದೆ ಎಂದರು.
ಸಂಗೀತ ನಿರ್ದೇಶಕ ಎಂ.ಎಸ್. ಪ್ರಸನ್ನ ಕುಮಾರ್ ಮಾತನಾಡಿ, ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ತ್ರಿಲೋಕ್ ತ್ರಿವಿಕ್ರಮ, ಶ್ರೀನಿಧಿ ಹಾಗೂ ಪ್ರಮೋದ್ ಸಾಹಿತ್ಯ ರಚಿಸಿದ್ದಾರೆ ಎಂದು ತಿಳಿಸಿದರು. ಹರಿ ಸಮಷ್ಠಿ ನಾಯಕನ ತಂದೆಯಾಗಿ, ರಾಯ ನಾಯಕನ ಸ್ನೇಹಿತನಾಗಿ ಅಭಿನಯಿಸಿದ್ದಾರೆ. ಸಾಗರ್ ಎನ್. ಛಾಯಾಗ್ರಹಣದ ಜವಾಬ್ದಾರಿ ನಿರ್ವಹಿಸಿದ್ದಾರೆ. ಫ್ಯಾಂಟಸಿ, ಮ್ಯಾಜಿಕ್, ಹಾಸ್ಯ ಹಾಗೂ ಥ್ರಿಲ್ಲರ್ ಅಂಶಗಳ ಸಮ್ಮಿಶ್ರಣದೊಂದಿಗೆ ಮೂಡಿಬಂದಿರುವ ‘ಮಿಸ್ಟರ್ ಲಕ್ಕಿ’ ಚಿತ್ರವು ಅಕ್ಟೋಬರ್ 30ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಟೀಸರ್ ಮತ್ತು ‘ಟೋಪಿ’ ಹಾಡಿನ ಬಿಡುಗಡೆಯೊಂದಿಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
