Cinema News
ನನ್ನ ಮದ್ಯ ಹಾಗೂ ಸಿಗರೇಟಿನಲ್ಲಿ ಡ್ರಗ್ಸ್ ಮಿಕ್ಸ್ ಮಾಡಲಾಗಿದೆ: ನಟ ಸಿದ್ದಾಂತ್ ಕಪೂರ್

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಬೆಂಗಳೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದಾರೆ. ಇದೀಗ ಸಿದ್ದಾಂತ್ ಕಪೂರ್ ನೀಡಿರುವ ಹೇಳಿಕೆಯೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ.
”ನನ್ನ ಮದ್ಯ ಹಾಗೂ ಸಿಗರೇಟಿನಲ್ಲಿ ಡ್ರಗ್ಸ್ ಸೇರಿಸಲಾಗಿದೆ. ನಾನು ಸ್ವಯಂಪ್ರೇರಿತವಾಗಿ ಯಾವುದೇ ಡ್ರಗ್ಸ್ ಸೇವಿಸಿಲ್ಲ. ನಾನು ಬೆಂಗಳೂರಿಗೆ ಆಗಾಗ್ಗೆ ಬರುತ್ತಿರುತ್ತೇನೆ. ಈಗ ರೇಡ್ ಮಾಡಲಾದ ಹೋಟೆಲ್ಗೆ ಸುಮಾರು ನಾಲ್ಕು ಬಾರಿ ಡಿಜೆ ಆಗಿ ನಾನು ಬಂದಿದ್ದೇನೆ. ನಾನು ಪ್ರಜ್ಞಾಪೂರ್ವಕವಾಗಿ ಡ್ರಗ್ಸ್ ಸೇವಿಸಿಲ್ಲ. ನನ್ನ ಸಿಗರೇಟು ಹಾಗೂ ಮದ್ಯಕ್ಕೆ ಡ್ರಗ್ಸ್ ಬೆರೆಸಲಾಗಿದೆ ಎಂದು ಸಿದ್ಧಾಂತ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಪೂರ್ವ ವಲಯದ ಡಿಸಿಪಿ ಭೀಮಾಶಂಕರ್ ಗುಳೇದ್, ”ಹೋಟೆಲ್ಗೆ ಬಂದು ಹೋಗಿರುವ ಎಲ್ಲ ಅತಿಥಿಗಳ ಪಟ್ಟಿ ನಮಗೆ ಸಿಕ್ಕಿದೆ. ಅನುಮಾನಾಸ್ಪದ ವ್ಯಕ್ತಿಗಳಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಿದ್ದೇವೆ” ಎಂದರು.
ಜಾಮೀನು ಪಡೆದ ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಟ ಸಿದ್ಧಾಂತ್ ಕಪೂರ್, ”ನಾನು ಹೋಟೆಲ್ನಲ್ಲಿದ್ದೆ. ನನ್ನನ್ನು ವಿಚಾರಣೆ ಮಾಡಲಾಯ್ತು. ನಾನು ವಿಚಾರಣೆಗೆ ಸಹಕರಿಸುತ್ತಿದ್ದೇನೆ. ಬೆಂಗಳೂರು ಪೊಲೀಸರು ನಿಜಕ್ಕೂ ಬಹಳ ಒಳ್ಳೆಯವರು. ಸಭ್ಯ ರೀತಿಯಲ್ಲಿ ಅವರು ವರ್ತಿಸಿದರು. ಅವರು ಬಹಳ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಆ ಕೆಲವನ್ನು ಅವರು ಮುಂದುವರೆಸಬೇಕು” ಎಂದರು.
